ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ನಡೆದಿದ್ದ ನಕಲಿ ಬಂಗಾರದ ಮೇಲಿನ ಅಡಮಾನ ಸಾಲದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಇಂದು ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ .ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯ ರೈತರ ಪರವಾಗಿ ಇರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 62 ಕೋಟಿ ರೂ. ನಷ್ಟು ನಕಲಿ ಬಂಗಾರ ಅಡವಿಟ್ಟು ಸಾಲ ತೆಗೆದು ಭ್ರಷ್ಟಾಚಾರ ನಡೆಸಲಾಗಿದ್ದ ವಿಚಾರ ಪ್ರಸ್ತಾಪಿಸಿದರು.
ಈ ಕುರಿತು ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಇದನ್ನು ಸಿಒಡಿ ತನಿಖೆಗೆ ಒಳಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ಬಿದ್ದು ಹೋಗಿತ್ತು. ಈಗ ಹಿಂದಿನ 62 ಕೋಟಿ ರೂ. ಗೆ ಬಡ್ಡಿ ಸೇರಿ ಈಗ 120 ಕೋಟಿ ರೂ. ಗೆ ತಲುಪಿದೆ. ಇಷ್ಟೊಂದು ಭ್ರಷ್ಟಾಚಾರ ಆಗಿದೆ. ಇದು ರೈತರಿಗೆ ಸೇರಬೇಕಾದ ಹಣ. ಈ ಕುರಿತು ಸೂಕ್ತ ತನಿಖೆ ನಡೆಸಬೇಕಿದೆ ಎಂದು ಸಭೆಯ ಮುಂದಿಡಲಾಯಿತು. ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಭೆ, ಜಿಲ್ಲೆಯ ಎಲ್ಲಾ ಶಾಸಕರ ಸಮ್ಮುಖದಲ್ಲಿ ಸಿಬಿಐಗೆ ನೀಡಲು ತೀರ್ಮಾನ ಕೈಗೊಂಡಿತು. ನಾಡಿದ್ದು, ಜಿಲ್ಲೆಗೆ ಆಗಮಿಸುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಸಭೆಯ ತೀರ್ಮಾನವನ್ನು ತಿಳಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಡಿಸಿಸಿ ಬ್ಯಾಂಕ್ನಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಹಿಂದೆ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು. ಕಿಮ್ಮನೆ ರತ್ನಾಕರ್ ಅವರು ಹಿಂದಿನ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಮುಂದಾಗಿ ನಂತರ ಪಕ್ಷಕ್ಕೆ ಸೇರಿಸಿ ಕೊಂಡಿರಲಿಲ್ಲ. ರೈತರಿಗೆ ಸೇರಬೇಕಾದ ಹಣವನ್ನು ಹೀಗೆ ಲೂಟಿ ಮಾಡಿದ್ದರ ವಿರುದ್ಧ ನಾನು ಒಬ್ಬಂಟಿಯಾಗಿ ಧ್ವನಿ ಎತ್ತಿದ್ದೆ. ಈಗ ಸಿಬಿಐಗೆ ವಹಿಸಿದ್ದು ಸರಿಯಾಗಿದೆ. ಸಹಕಾರಿ ಅಧಿಕಾರಿಗಳು ಈಗ ಸಹಕಾರ ಸಂಘಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ತಿಳಿಸಿದರು.