ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಲವು ದಿನಗಳ ಹಿಂದೆ ಯುವ ಬಿಜೆಪಿ ಮುಖಂಡನೋರ್ವ ನಾಪತ್ತೆಯಾಗಿದ್ದ. ಹೀಗೆ ನಾಪತ್ತೆಯಾದ ಎರಡ್ಮೂರು ದಿನದ ಬಳಿಕ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿದ್ದು ಹೇಗೆ ಗೊತ್ತೇ?
ರಾಜಕೀಯ ವೈಷಮ್ಯ: ಸೊರಬ ತಾಲೂಕಿನ ಮನ್ಮನೆ ಗ್ರಾಮದ ಲೇಖಪ್ಪ(36) ಕೊಲೆಯಾದ ವ್ಯಕ್ತಿ. ಲೇಖಪ್ಪ ತನ್ನ ಗ್ರಾಮದಲ್ಲಿ ಒಳ್ಳೆಯ ಹೆಸರು ಹೊಂದಿದ್ದ. ಚಿಕ್ಕ ವಯಸ್ಸಿನಲ್ಲೇ ರಾಜಕೀಯವಾಗಿ ಬೆಳೆಯುತ್ತಿದ್ದು ಮದುವೆಗಾಗಿ ಕನ್ಯೆ ಹುಡುಕುತ್ತಿದ್ದ. ಇದನ್ನು ಸಹಿಸದ ಅದೇ ಗ್ರಾಮದ ಕೃಷ್ಣಪ್ಪ ಎಂಬಾತ ಲೇಖಪ್ಪನಿಗೆ ಕನ್ಯೆಯ ಫೋಟೋ ತೋರಿಸಲು ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಟವಲ್ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಲೇಖಪ್ಪನ ಶವವನ್ನು ಸಮೀಪದ ಕಡಸೂರು ಹೊಳೆಗೆ ಬಿಸಾಡಿ ಬಂದಿದ್ದಾನೆ.
![BJP leader murder in Shivamogga, Shivamogga murder, BJP leader Lekhappa murder, BJP leader Lekhappa missing case in Shivamogga, ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡನ ಹತ್ಯೆ, ಶಿವಮೊಗ್ಗದಲ್ಲಿ ಕೊಲೆ, ಬಿಜೆಪಿ ಮುಖಂಡ ಲೇಖಪ್ಪ ಹತ್ಯೆ, ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡ ಲೇಖಪ್ಪ ನಾಪತ್ತೆ ಪ್ರಕರಣ,](https://etvbharatimages.akamaized.net/etvbharat/prod-images/kn-smg-05-soraba-murderarrest-7204213_02052022232839_0205f_1651514319_1100.jpg)
ನಾಪತ್ತೆ ಪ್ರಕರಣ: ಏಪ್ರಿಲ್ 11ರಂದು ಮನೆಯಿಂದ ಜಮೀನು ಕೆಲಸಕ್ಕೆ ಹೋದ ಲೇಖಪ್ಪ ಎರಡ್ಮೂರು ದಿನ ಮನೆಗೆ ಬರಲೇ ಇಲ್ಲ. ಏ.14 ರಂದು ಆತನ ಸಹೋದರ ಹುಚ್ಚಪ್ಪ ಸೊರಬ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಬಳಿಕ ಪೊಲೀಸರು ಶೋಧ ಕಾರ್ಯಾರಂಭಿಸಿದ್ದಾರೆ. ಈ ವೇಳೆ ಲೇಖಪ್ಪನ ಮೃತದೇಹ ಹೊಳೆಯಲ್ಲಿ ಕಾಣಿಸಿಕೊಂಡಿದೆ. ಪೊಲೀಸರು ಆರಂಭದಲ್ಲಿ ಇದೊಂದು ಸಹಜ ಸಾವು ಪ್ರಕರಣವೆಂದೇ ಭಾವಿಸಿ, ತನಿಖೆ ಮುಂದುವರೆಸಿದ್ದರು.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: ಪ್ರಚೋದನಾತ್ಮಕ ಹೇಳಿಕೆ ಆರೋಪದಡಿ ಈಶ್ವರಪ್ಪ ವಿರುದ್ಧ ಎಫ್ಐಆರ್
ಎಡಿಟೆಡ್ ಫೋಟೋ ಸುಳಿವು: ಲೇಖಪ್ಪನ ಜೊತೆಗೆ ಯುವತಿಯೊಬ್ಬಳು ವಿವಾಹವಾಗಿರುವಂತೆ ಎಡಿಟೆಡ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪ್ರಕರಣದ ಹಾದಿ ತಪ್ಪಿಸಲು ಹಾಗೂ ಗ್ರಾಮಸ್ಥರು, ಪೊಲೀಸರ ಗಮನ ಬೇರೆಡೆಗೆ ಸೆಳೆಯಲು ಈ ಫೋಟೋ ಕೃಷ್ಣಪ್ಪ ಹರಿಬಿಟ್ಟಿದ್ದ ಎನ್ನಲಾಗುತ್ತಿದೆ. ಈ ಫೋಟೋದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹೊಸ ಸಂಗತಿ ಗೊತ್ತಾಯಿತು. ಮೇ.2 ರಂದು ಆರೋಪಿ ಕೃಷ್ಣಪ್ಪನ ಮೇಲೆ ಅನುಮಾನವಿರುವುದಾಗಿ ಪುನಃ ಮತ್ತೊಂದು ದೂರು ಸಹ ದಾಖಲಾಗಿತ್ತು.
ಆರೋಪಿ ಬಂಧನ: ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣಪ್ಪನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ.
ಕೊಲೆಗೆ ಕಾರಣವೇನು?: ಮನ್ಮನೆ ಗ್ರಾಮದಲ್ಲಿ ಬಿಜೆಪಿ ಮುಖಂಡನಾಗಿದ್ದ ಲೇಖಪ್ಪನಿಗೆ ಮತ್ತು ಅದೇ ಗ್ರಾಮದ ಗ್ರಾ.ಪಂ ಸದಸ್ಯೆಯ ಪತಿ ಕೃಷ್ಣಪ್ಪನ ನಡುವೆ ರಾಜಕೀಯವಾಗಿ ಪೈಪೋಟಿ ಇತ್ತು. ಇತ್ತೀಚೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯೊಂದನ್ನು ಲೇಖಪ್ಪ ಕೈಗೊಂಡಿದ್ದ. ಈ ಸಂದರ್ಭದಲ್ಲಿ ಲೇಖಪ್ಪ ಮತ್ತು ಕೃಷ್ಣಪ್ಪನ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲಾಗಿದೆ. ರಾಜಕೀಯವಾಗಿ ಲೇಖಪ್ಪ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಲೇಖಪ್ಪನ ಹತ್ಯೆಗೆ ಕೃಷ್ಣಪ್ಪ ಸಂಚು ರೂಪಿಸಿದ್ದಾನೆ. ಬಳಿಕ ಲೇಖಪ್ಪನನ್ನು ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಸುಮ್ಮನಾಗಿದ್ದ.
ಇದನ್ನೂ ಓದಿ: ಹರ್ಷ ಕೊಲೆಗಡುಕರನ್ನು ಗೂಂಡಾಗಳೆನ್ನದೆ ಒಳ್ಳೆಯವರು ಅಂತ ಕರೆಯಬೇಕೆ? : ಸಚಿವ ಈಶ್ವರಪ್ಪ