ಶಿವಮೊಗ್ಗ : ಶಿವಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ ಶಿಕಾರಿಪುರ ತಾಲೂಕಿನ ಉಡುತಡಿಯನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಉಡುತಡಿಯಲ್ಲಿ ಶಿವಶರಣೆ ಅಕ್ಕ ಮಹಾದೇವಿಯವರ 66 ಅಡಿ ಎತ್ತರದ ಪ್ರತಿಮೆಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು, ಅಕ್ಕಮಹಾದೇವಿ ಶ್ರೇಷ್ಠ ವಚನಾಗಾರ್ತಿಯಾಗಿದ್ದರು. ಶ್ರೀಮಂತಿಕೆಯನ್ನು ಬಿಟ್ಟು ಮಲ್ಲಿಕಾರ್ಜುನನ್ನು ಸೇರಲು ಇಲ್ಲಿಂದ ಶ್ರೀಶೈಲಕ್ಕೆ ಹೋದವರು.
ಅವರು ಪಾರ್ವತಿಯಂತಯೇ ಇದ್ದು, ಶಿವನಲ್ಲಿ ಐಕ್ಯರಾದವರು. ಪ್ರಪಂಚದ ಪ್ರಥಮ ಮಹಿಳಾ ವಚನಾಗಾರರಾಗಿದ್ದ ಅಕ್ಕಮಹಾದೇವಿಯವರ ಜನ್ಮ ಸ್ಥಳವನ್ನು ಅಕ್ಷರಧಾಮದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ಅವರು, ಶಿವ ಶರಣೆ ಪೂಜ್ಯ ಅಕ್ಕಮಹಾದೇವಿ ಅವರು 12 ಶತಮಾನದಲ್ಲೇ ವಿವಿಧ ಸ್ಥಳದಲ್ಲಿ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ತಾಯಿ. ಅಕ್ಕಮಹಾದೇವಿ ಅವರ 66 ಅಡಿ ಎತ್ತರದ ಪ್ರತಿಮೆಯು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಮ್ಮ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ನಿರ್ಮಾಣವಾಗುತ್ತದೆ.
ದೆಹಲಿಯ ಅಕ್ಷರಧಾಮ ರೀತಿ ಅಭಿವೃದ್ಧಿಯ ಕೆಲಸ ಇಲ್ಲಿ ವೇಗವಾಗಿ ಲೋಕಾರ್ಪಣೆಗೊಳ್ಳಲಿದೆ. ಜೊತೆಗೆ ಅಕ್ಕಮಹಾದೇವಿ ಜೀವನ ಚರಿತ್ರೆ ಬಿಂಬಿಸುವ 500 ಅಡಿ ಉದ್ದದ ಕದಳಿವನದ ಗುಹೆ. ಮನುಕುಲದ ಸಮಾನತೆ ಸಾರಿದ 30 ಪ್ರಸಿದ್ಧ ಶಿವಶರಣರ ಶಿಲಾಕೃತಿ ಮಂಟಪಗಳು, ದೋಣಿ ವಿಹಾರ, ದಿಬ್ಬದ ಮೇಲೆ ಶ್ರೀ ಶರಣೆ ಅಕ್ಕಮಹಾದೇವಿ ಶಿಲ್ಪ ಕಲಾಕೃತಿಗಳು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅದನ್ನು ಸ್ಥಳೀಯರು ಉಳಿಸಿ, ಬೆಳಸಬೇಕು. ಅಲ್ಲಮ ಪ್ರಭು ಅವರ ಕ್ಷೇತ್ರ ಅಭಿವೃದ್ಧಿಗೆ 1 ಕೋಟಿ ಹಣ ಬಿಡುಗಡೆಯಾಗಲಿದೆ. ಅಲ್ಲಿಯೂ ಕೂಡ ಅಭಿವೃದ್ಧಿ ಕೆಲಸ ಆಗಲಿದೆ ಎಂದರು.