ಶಿವಮೊಗ್ಗ: ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ಆರು ವರುಷಗಳಿಂದ ರಕ್ತವೇ ಉತ್ಪತ್ತಿಯಾಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.
ಹೌದು.., 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ - ತಿಂಡಿಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡ ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ.
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿಗಳ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ. ರಕ್ತಹೀನತೆಯಿಂದಾಗಿ ಇದ್ದಕ್ಕಿಂದಂತೆ ಒದ್ದಾಡುವ ಮಗಳ ಸಂಕಟ ನೋಡದೆ ಆಕೆಯ ಪೋಷಕರು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದಾರೆ. ಈ ಬಾಲಕಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20 ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈಕೆಯ ಪೋಷಕರು ಇದಕ್ಕಾಗಿಯೇ ಪ್ರತಿ ತಿಂಗಳು 4 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಿದೆ. ನಾನಾ ಪ್ರಯತ್ನದ ನಡುವೆಯೂ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ.
6 ವರ್ಷದಿಂದ ಇವಳಿಗೆ ರಕ್ತ ಕೊಡಿಸಿದ್ದು, ಈವರೆಗೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಒಂದು ದಿನ ಕೂಲಿ ಹೋಗದಿದ್ದರೆ ಜೀವನ ಕಷ್ಟ ಎಂಬ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಮಗಳಿಗೆ ಪ್ರತಿ ತಿಂಗಳು ರಕ್ತ ಹೊಂದಿಸಬೇಕು. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಆಪರೇಷನ್ ಮಾಡಬೇಕು. ಇದಕ್ಕೆ ಸುಮಾರು 32 ಲಕ್ಷ ರೂ. ಬೇಕು ಎನ್ನುತ್ತಿದ್ದಾರೆ. ಹೊಟ್ಟೆಪಾಡೇ ಕಷ್ಟವಾಗಿರುವಾಗಿರುವಾಗ ಇಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ತರುವುದು ಎಂದು ಗೊತ್ತಾಗುತ್ತಿಲ್ಲ. ಆದರೆ, ಮಗಳು ಪಡುವ ಕಷ್ಟ ಭಗವಂತನಿಗೆ ಗೊತ್ತು. ಸಹೃದಯಿಗಳು ಸಹಕಾರ ನೀಡಿದರೆ ಮಗು ಉಳಿಯುತ್ತದೆ ಎನ್ನುತ್ತಾರೆ ಆಕೆಯ ತಂದೆ ಮಂಜಪ್ಪ.
ವಿಚಿತ್ರ ಕಾಯಿಲೆಗೆ ಒಳಗಾಗಿರುವ ಬಾಲಕಿಯ ನೆರವಿಗೆ ರಾಜ್ಯದ ಜನ ಸಹಾಯ ಹಸ್ತ ಚಾಚಬೇಕಿದೆ. ಸಹಾಯ ಮಾಡ ಬಯಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು. ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8151073504 ಗೆ ಸಂಪರ್ಕಿಸಬಹುದು.
ಬ್ಯಾಂಕ್ ಖಾತೆ ಸಂಖ್ಯೆ: 10803101013296
ಐಎಫ್‌ಎಸ್‌ಸಿ ಕೋಡ್: ಪಿಕೆಜಿಬಿ 0010803