ಮೈಸೂರು: ಯುವಕನಿಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ರಮ್ಮನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಅರ್ಜುನ್ (24) ಎಂಬಾತ ಕೊಲೆಯಾದ ಯುವಕ.
ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ಗೆ ಕಳೆದ ರಾತ್ರಿ ಫೋನ್ ಮಾಡಿ, ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮೈಸೂರಿನ ಹೊರವಲಯದಲ್ಲಿ ಅರ್ಜುನ್ನನ್ನು ಅಟ್ಟಾಡಿಸಿಕೊಂಡು ಬಂದ ಕಿಡಿಗೇಡಿಗಳು, ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಕೊನೆಗೆ ಹಳ್ಳಕ್ಕೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.
ಈ ಕುರಿತು ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ಅರ್ಜುನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.