ಮೈಸೂರು: ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನದ ಶುಭಾಶಯಗಳು. ಯೋಗದಿನದ ಪ್ರಯುಕ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆವೀಡು ಮೈಸೂರಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತುಗಳನ್ನು ಶುರು ಮಾಡಿದರು.
ಭಾರತವು ಸದಾ ವಿಶ್ವದ ಒಳಿತು ಬಯಸುತ್ತೆ. ಈ ಬಾರಿಯ ವಿಶ್ವ ಯೋಗದಿನದ ಆಶಯವೂ ಇದಕ್ಕೆ ಪೂರಕವಾಗಿದೆ. ಮಾನವತೆಗೆ ಯೋಗ ಎನ್ನುವುದು ಈ ವರ್ಷದ ಆಶಯ. ನಮ್ಮ ಋಷಿಮುನಿಗಳು ‘ಯೋಗದಿಂದ ವಿಶ್ವಕ್ಕೆ ಶಾಂತಿ’ ಎಂದು ಪ್ರತಿಪಾದಿಸಿದ್ದರು. ಯೋಗದಿಂದ ಸಮಾಜಕ್ಕೆ, ದೇಶಕ್ಕೆ ಅಷ್ಟೇ ಅಲ್ಲ ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಇದನ್ನು ಕೆಲವರು ವಿಪರೀತದ ಚಿಂತನೆ ಎಂದುಕೊಳ್ಳಬಹುದು. ಆದರೆ ಭಾರತೀಯರಿಗೆ ಇದು ಹೊಸದಲ್ಲ. ಪಿಂಡದಲ್ಲಿರುವುದು ಬ್ರಹ್ಮಾಂಡದಲ್ಲಿದೆ ಎನ್ನುವುದು ಭಾರತೀಯರ ಚಿಂತನೆ. ನಾವು ಬದಲಾಗಲು ಆರಂಭಿಸಿದರೆ ಜಗತ್ತು ಬದಲಾಗುವುದು ಆರಂಭಿಸುತ್ತದೆ ಎಂದು ಹೇಳಿದರು.
ಓದಿ: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ
ಯೋಗವು ಜಗತ್ತಿನ ಹಲವು ಸಮಸ್ಯೆಗಳಿಗೆ ಉತ್ತಮ ಮದ್ದು ಎನಿಸಿದೆ. ನಾವೀಗ ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈಗ ದೇಶದ 75 ವಿವಿಧ ನಗರಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಯೋಗದಿನ ನಡೆಯುತ್ತಿದೆ. ಇವು ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಔನ್ನತ್ಯಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಗಾರ್ಡಿಯನ್ ರಿಂಗ್ ಆಫ್ ಯೋಗ: ವಿಶ್ವದ ವಿವಿಧೆಡೆ ಸೂರ್ಯರಶ್ಮಿ ಸ್ಪರ್ಶವಾಗುವ ಹೊತ್ತಿಗೆ ಯೋಗದಿನದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಪ್ರಯೋಗವು ವಿಶ್ವಮಟ್ಟದಲ್ಲಿ ಗಾರ್ಡಿಯನ್ ರಿಂಗ್ ಆಫ್ ಯೋಗ ಹೆಸರಿನಲ್ಲಿ ಜನಜನಿತವಾಗಿದೆ. ಯೋಗ ಎನ್ನುವುದು ಕೇವಲ ಜೀವನದ ಭಾಗ ಅಲ್ಲ. ಅದು ಜೀವನದ ರೀತಿ ಆಗುತ್ತಿದೆ ಎಂದು ಮೋದಿ ಹೇಳಿದರು.
ಓದಿ: ಅರಮನೆ ಮುಂಭಾಗದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ : ನೇರಪ್ರಸಾರ
ಯೋಗದ ಬಗ್ಗೆ ತಿಳಿಯೋಣ, ಯೋಗದ ರೀತಿಯಲ್ಲಿ ಬದುಕೋಣ, ಯೋಗವನ್ನು ನಮ್ಮದಾಗಿಸಿಕೊಳ್ಳೋಣ. ನಾವು ಯೋಗದ ರೀತಿಯಲ್ಲಿ ಜೀವನ ಮುಂದುವರಿಸೋಣ. ಯೋಗದಿಂದ ಸಿಗುವ ನೆಮ್ಮದಿಯನ್ನು ಎಲ್ಲರೂ ಸಂಭ್ರಮಿಸೋಣ. ಯೋಗದಿಂದ ನಾವು ಎಲ್ಲರೂ ಬೆಸೆದುಕೊಳ್ಳಲು ದೊಡ್ಡ ಅವಕಾಶ ಸಿಕ್ಕಿದೆ. ಈಗ ಯುವಕರು ಹೊಸ - ಹೊಸ ಆಲೋಚನೆಗಳೊಂದಿಗೆ ಯೋಗದ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಸ್ಟಾರ್ಟ್ಅಪ್ ಅವಕಾಶಗಳೂ ಸಾಕಷ್ಟು ಇವೆ. ಮೈಸೂರಿನಲ್ಲಿ ಈಗ ಇನ್ನೊವೇಟಿವ್ ಡಿಜಿಟಲ್ ಎಕ್ಸಿಬಿಷನ್ ಆಯೋಜಿಸಿದ್ದೇವೆ ಎಂದು ಮೋದಿ ಹೇಳಿದರು.
ಮೂರು ಬಾರಿ ಓಂಕಾರ ಉಚ್ಚಾರಣೆಯೊಂದಿಗೆ ಯೋಗದಿನದ ಪ್ರಯುಕ್ತ ನಡೆಯುತ್ತಿರುವ ವಿಶೇಷ ಯೋಗಾಭ್ಯಾಸ ಆರಂಭವಾಯಿತು. ಸಂಸ್ಕೃತದ ಶ್ಲೋಕವೊಂದರ ಮೂಲಕ ಪ್ರಾರ್ಥನೆ ಮಾಡಲಾಯಿತು.
ಮೈಸೂರನ್ನು ಗುಣಗಾನ ಮಾಡಿದ ಆಯುಷ್ ಸಚಿವ: ಯೋಗ ದಿನದ ಸ್ವಾಗತ ಭಾಷಣ ಮಾಡಿದ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮೈಸೂರಿನ ಗುಣಗಾನ ನಡೆಸಿದ್ದಾರೆ. ಅಲ್ಲದೇ ಯೋಗ ದಿನದ ಮಹತ್ವ ಸಾರಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಐಇ ಕೂಡಾ ಮಾಡಿದ್ದು, ಈ ದಿನಕ್ಕೆ ಶುಭಕೋರಿದ್ದಾರೆ.