ಮೈಸೂರು: ತ್ರಿಭಾಷ ಸೂತ್ರದ ಹೆಸರಿನಲ್ಲಿ ಕಡ್ಡಾಯ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ನಾವು ವಿರೋಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಶಾರದಾದೇವಿ ನಗರದ ತಮ್ಮ ನಿವಾಸದ ಮುಂದೆ ಮಾಧ್ಯಮಗಳ ಜೊತೆ ಮಾತಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತ್ರಿಭಾಷ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಹೇರಲು ಹುನ್ನಾರ ನಡೆಸಿದೆ, ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಭಾಷೆ, ನೆಲ, ಜಲ ವಿಚಾರದಲ್ಲಿ ರಾಜಿ ಇಲ್ಲ. ಈ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರವನ್ನು ಕೇಳಿಲ್ಲ, ಆದರೂ ಹಸ್ತಕ್ಷೇಪ ಮಾಡಲು ಮುಂದಾದರೆ ನಾವು ತಮಿಳುನಾಡು ಮಾದರಿಯಲ್ಲೇ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಇವಿಎಂ ಬಗ್ಗೆ ಇದ್ದ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದ ಅವರು, ಪಕ್ಷೇತರ ಅಭ್ಯರ್ಥಿಗಳಿಗೆ ಸಚಿವ ಸ್ಥಾನದ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.