ಮೈಸೂರು : ಕೇಂದ್ರ ಸರ್ಕಾರದಿಂದ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲೇ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮೈಸೂರಿನಲ್ಲಿ ತಿಳಿಸಿದ್ದಾರೆ. ಇಂದು ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರುಯ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದರಿಂದ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಆದರೆ, ಜನ ನಿರ್ಲಕ್ಷ್ಯ ಮಾಡದೇ ಸಮಯಕ್ಕೆ ಸರಿಯಾಗಿ ಎರಡನೇ ಹಾಗೂ ಮೂರನೇ ಡೋಸ್(ಬೂಸ್ಟರ್) ಲಸಿಕೆ ಹಾಕಿಸಿಕೊಳ್ಳಿ. ಕೋವಿಡ್ ನಿಯಮ ಪಾಲಿಸಿ ಎಂದರು. ಜೊತೆಗೆ ಕೋವಿಡ್ ಬೇರೆ ದೇಶದಲ್ಲಿ ಇದೆ, ನಮ್ಮಲ್ಲಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು.
ಬೇರೆ ದೇಶಗಳಲ್ಲಿ ಎಲ್ಲಿ ಲಸಿಕೆ ನೀಡಿಲ್ಲವೂ ಅಲ್ಲಿ ಕೋವಿಡ್ನ ಬೇರೆ ಬೇರೆ ಪ್ರಬೇಧಗಳು ಕಾಣಿಸಿಕೊಳ್ಳುತ್ತಿವೆ. ನಮ್ಮಲ್ಲಿ 3ನೇ ಅಲೆ ಬಂದರೂ ಕೂಡ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಇದಕ್ಕೆ ಕಾರಣ ನಮ್ಮ ದೇಶದ ಪ್ರಧಾನಿಯವರ ಬದ್ಧತೆಯೇ ಕಾರಣ. 185 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಜೊತೆಗೆ ನಮ್ಮ ರಾಜ್ಯದಲ್ಲೂ 10.30 ಕೋಟಿಗಿಂತ ಹೆಚ್ಚು ಡೋಸ್ ಲಸಿಕೆ ನೀಡಿದ್ದರಿಂದ 3ನೇ ಅಲೆಯ ಸಂದರ್ಭದಲ್ಲಿ ಸಾವು ನೋವು ಉಂಟಾಗಲಿಲ್ಲ ಎಂದರು.
ಇದನ್ನೂ ಓದಿ: ತರಕಾರಿ ದರದಲ್ಲಿ ಕೊಂಚ ಏರಿಳಿಕೆ : ಇಂದಿನ ಮಾರುಕಟ್ಟೆ ಬೆಲೆ
ಹಾಗಾಗಿ, ನಾಲ್ಕನೇ ಅಲೆಯಿಂದ ತಪ್ಪಿಸಿಕೊಳ್ಳಲು ಮತ್ತು ಯಾವುದೇ ತೊಂದರೆಯಾಗಬಾರದು ಎಂದರೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಹಾಗೂ ಅಗತ್ಯ ಇರುವ ಕಡೆ, ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿಕೊಳ್ಳಿ ಎಂದರು. ಸದ್ಯ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯವಾದ ವ್ಯವಸ್ಥೆಯನ್ನು ಮಾಡುತ್ತಿದೆ. ಸದ್ಯದಲ್ಲೇ 5-11 ವರ್ಷದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು