ಮೈಸೂರು: ಈ ಬಾರಿ ದಸರಾ ಸರಳವೂ ಅಲ್ಲ, ಅದ್ದೂರಿಯಾಗಿಯೂ ಮಾಡದೇ ಸಾಧಾರಣ ರೀತಿಯಲ್ಲೂ ಅಲ್ಲದೇ, ಚಾಮುಂಡೇಶ್ವರಿ ಯಾವ ರೀತಿ ನಡೆಸಬೇಕೆಂದು ತಿರ್ಮಾನ ಮಾಡಿದ್ದಾಳೋ ಅದೇ ರೀತಿ ದಸರಾ ನಡೆಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸೋಮಣ್ಣ, ದಸರಾ ಪೂರ್ವಭಾವಿಯ ಮೊದಲ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐತಿಹಾಸಿಕ ಪಾರಂಪರಿಕ ದಸರಾ ಹಿಂದಿನಿಂದಲೂ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ರೀತಿ ನಡೆಯಬೇಕು. ಒಂದು ಸಣ್ಣ ಅಪಚಾರ ಆಗದಂತೆ ನಡೆಯಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರ ಬಯಕೆ ಎಂದರು.
ಅದೇ ರೀತಿ, ರಾಜ ಮಹಾರಾಜರು ಹಿಂದಿನಿಂದಲೂ ಯಾವ ರೀತಿ ನಡೆಸಿಕೊಂಡು ಬಂದಿದ್ದಾರೋ ಅದೇ ರೀತಿ ನಡೆಸಿಕೊಂಡು ಹೋಗಲು ಇಂದು ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಸದಸ್ಯರು ಒಟ್ಟಾಗಿ ಸೇರಿ ಸಭೆ ನಡೆಸುತ್ತಿದ್ದೇವೆ ಎಂದರು.
ಈ ಬಾರಿ ಸರಳ ದಸರಾವೋ ಅದ್ದೂರಿ ದಸರಾವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರಳವೂ ಅಲ್ಲ, ಅದ್ದೂರಿಯಾಗಿಯೂ ಇಲ್ಲ, ಚಾಮುಂಡೇಶ್ವರಿ ಯಾವ ರೀತಿ ನಡೆಸಿಕೊಳ್ಳಬೇಕೊ ಅದೇ ರೀತಿ ನಡೆಯುತ್ತದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.