ಮೈಸೂರು: ತಂದೆ ಮತ್ತು ಮಗನನ್ನು ತಡೆದು ಸುಲಿಗೆಗೆ ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಜೀವಿತ್(19), ಶ್ರೀನಿವಾಸ(19), ಚೇತನ(21) ಹಾಗೂ ಸಚಿತ್(22) ಬಂಧಿತರು. ಹಾಸನ ಜಿಲ್ಲೆಯ ಶಾಂತಿಗ್ರಾಮದ ನಿವಾಸಿ ನರಸಿಂಹಯ್ಯ ಹಾಗೂ ಮಗ ವೇಣುಗೋಪಾಲ್ ಎಂಬುವರನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಯುವಕರು ಇದೀಗ ಕಂಬಿ ಎಣಿಸುತ್ತಿದ್ದಾರೆ.
ಆರೋಪಿಗಳು, ಭಾನುವಾರ ಮಧ್ಯರಾತ್ರಿಯಲ್ಲಿ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ತಂದೆ, ಮಗನನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ ಮಾಡಲು ಯತ್ನಿಸಿದ್ದರು. ಗ್ರಾಮ ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಯ್ಯ ತಮ್ಮ ಸಂಬಂಧಿಕರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ವಿಚಾರಿಸಲು ಮೈಸೂರಿಗೆ ಮಗನ ಜೊತೆ ಬಂದಿದ್ದರು.
ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ ನಂತರ ತಮ್ಮ ಗ್ರಾಮಕ್ಕೆ ತೆರಳಲು ಮಧ್ಯರಾತ್ರಿಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ಯುವಕರ ತಂಡ ಇಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ. ಗಸ್ತಿನಲ್ಲಿದ್ದ ಗರುಡಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದು, ಉಳಿದಿಬ್ಬರು ಸಿಕ್ಕಿಬಿದ್ದಿದ್ದಾರೆ.
ಬಂಧಿತರ ಪೈಕಿ ಜೀವಿತ್ ಸರ್ಕಾರಿ ಕೆಲಸದ ಆಕಾಂಕ್ಷಿಯಾಗಿದ್ದು, ತನ್ನ ತಂದೆಯ ಕೆಲಸಕ್ಕೆ ನೇಮಕವಾಗುವ ಹಂತದಲ್ಲಿದ್ದ ಎಂದು ಹೇಳಲಾಗಿದೆ. ಚೇತನ್ ಬುಲೆಟ್ ಶೋರೂಂನಲ್ಲಿ ನೌಕರನಾಗಿದ್ದಾನೆ. ಸಚಿತ್ ಬಿಎಸ್ಎನ್ಎಲ್ ವೈಫೈನ ಗುತ್ತಿಗೆದಾರ ಎಂದು ಹೇಳಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಫಿ ಬಾರ್ ಹೆಸರಲ್ಲಿ ಹುಕ್ಕಾ ಬಾರ್: ಮೂವರ ಬಂಧನ