ಮೈಸೂರು: ಐಟಿ ಉದ್ಯೋಗಿಯೊಬ್ಬರಿಗೆ ಬೆದರಿಕೆಯೊಡ್ಡಿ ಹಣ ದೋಚಿದ್ದ ಮೂವರು ಖದೀಮರನ್ನು ಮೇಟಗಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಬೆಲವತ್ತ ಗ್ರಾಮದ ಆರ್. ಪ್ರವೀಣ, ಬಿಎಂಶ್ರೀ ನಗರದ ಎನ್. ಶಿವಕುಮಾರ್ (23), ಹುಣಸೂರು ತಾಲೂಕಿನ ವಿ.ಪಿ ಬೋರೆ ನಿವಾಸಿ ರಘು (25) ಬಂಧಿತರು. ಇವರು ಐಟಿ ಉದ್ಯೋಗಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ ನಗದು, ಬೈಕ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಮೂವರು ಆರೋಪಿಗಳು ನಟೋರಿಯಸ್ ಕ್ರಿಮಿನಲ್‍ಗಳಾಗಿದ್ದು, ಆರ್. ಪ್ರವೀಣ್ ಹಾಗೂ ಶಿವಕುಮಾರ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ, ದೊಂಬಿ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು. ಜೊತೆಗೆ ರಘು ವಿರುದ್ಧ ಈ ಹಿಂದೆ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಲೈಂಗಿಕ ಕಿರುಕುಳ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?: ಮೈಸೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ವ್ಯಕ್ತಿಯೊಬ್ಬರು ಕತ್ತಿನಲ್ಲಿದ್ದ ಚೈನ್ ಅನ್ನು ಕಳೆದುಕೊಂಡು ಫೆ.1ರಂದು ಹುಡುಕುತ್ತಾ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಈ ವೇಳೆ, ಸರದ ಕುರಿತು ವಿಚಾರಿಸುತ್ತಿರುವಾಗ ನಾಲ್ಕು ಜನ ಅಪರಿಚಿತರು ಬಂದು ನಿಮ್ಮ ಸರವನ್ನು ಮಂಗಳಮುಖಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆ. ಅವರ ಮನೆ ಇರುವ ಜಾಗ ನನಗೆ ಗೊತ್ತು ಎಂದು ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಬಳಿಯಿದ್ದ ಎಟಿಎಂ ಕಾರ್ಡ್ಗಳನ್ನು ಕಿತ್ತುಕೊಂಡು ಜೀವ ಬೆದರಿಕೆಯೊಡ್ಡಿದ್ದರು.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ಕಾರ್ಯಾಚರಣೆ ಮಾಡಿ, ಮೂವರನ್ನು ಬಂಧಿಸಿದ್ದು, 42 ಸಾವಿರ ರೂ. ನಗದು, 2 ದ್ವಿಚಕ್ರ ವಾಹನ ಹಾಗೂ ಮೂರು ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.