ಮೈಸೂರು: ಹುಣಸೂರು ಮೈಸೂರಿನಿಂದ ದೂರವಿಲ್ಲ. ಹೀಗಾಗಿ ಅದನ್ನ ಪ್ರತ್ಯೇಕ ಜಿಲ್ಲೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹುಣಸೂರು ಪ್ರತ್ಯೇಕ ಜಿಲ್ಲೆಯ ಮನವಿ ಮಾಡಿರುವ ಬಗ್ಗೆ ತಿ.ನರಸೀಪುರ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಅವರು ಯಾಕೆ ಮನವಿ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಮೈಸೂರಿನಲ್ಲಿ ಒಟ್ಟು 8 ತಾಲೂಕುಗಳಿವೆ. ನಾಲ್ಕು ತಾಲೂಕುಗಳಿಗಾಗಿ ಹುಣಸೂರು ಜಿಲ್ಲೆ ಮಾಡಲು ಆಗುವುದಿಲ್ಲ ಎಂದರು.
ಹುಣಸೂರು ತಾಲೂಕಿನ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಕೂಡ ಹುಣಸೂರು ಜಿಲ್ಲೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ, ಅವರ ಬಳಿ ಮಾತನಾಡುತ್ತೇನೆ ಎಂದರು.
ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರವಾಗಿ ನಾನು ಉತ್ತರಿಸಲ್ಲ: ಸಂಸದ ಶ್ರೀನಿವಾಸ ಪ್ರಸಾದ್
ಮೈಸೂರು: ಹುಣಸೂರು ತಾಲೂಕನ್ನು ಪ್ರತ್ಯೇಕವಾಗಿ ಜಿಲ್ಲೆ ಮಾಡುವ ವಿಚಾರವಾಗಿ ನಾನು ಉತ್ತರ ನೀಡುವುದಿಲ್ಲವೆಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ತಿ.ನರಸೀಪುರ ತಾಲೂಕಿನ ಮಿನಿ ವಿಧಾನಸೌಧದ ಮುಂಭಾಗ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಧರ್ಮದೀಕ್ಷೆ ದಿನಾಚರಣೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಣಸೂರು ತಾಲೂಕನ್ನು ಪ್ರತ್ಯೇಕವಾಗಿ ಜಿಲ್ಲೆ ಮಾಡುವ ವಿಚಾರವಾಗಿ ನಾನು ಉತ್ತರ ನೀಡುವುದಿಲ್ಲ ಎಂದರು.