ಮೈಸೂರು: ಅರಮನೆ ಮುಂಭಾಗದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳ ಹಾಗೂ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಹೊರಡುವ ಅರಮನೆಯ ಮುಂಭಾಗದ ಸ್ಥಳವನ್ನು ಪರಿಶೀಲನೆ ನಡೆಸಿ, ಅಂದು ಅರಮನೆಯ ಮುಂಭಾಗದಲ್ಲಿ ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲೆಲ್ಲಿ ಜಂಬೂಸವಾರಿ ವೀಕ್ಷಣೆ ಮಾಡಲು ವೇದಿಕೆಗಳನ್ನು ನಿರ್ಮಾಣ ಮಾಡಬೇಕು. ಸಿಎಂ ಹಾಗೂ ಇತರ ಗಣ್ಯರು ನಂದಿಧ್ವಜ ಪೂಜೆಯ ನಂತರ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಯಾವ ರೀತಿ ಸಿದ್ಧತೆಗಳನ್ನು ಮಾಡಬೇಕು. ಇತರರಿಗೆ ಎಲ್ಲೆಲ್ಲಿ ಆಸನದ ವ್ಯವಸ್ಥೆಯನ್ನು ಕಲ್ಪಿಸಬೇಕು ಎನ್ನುವುದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದಕ್ಕೂ ಮುನ್ನ ಉಸ್ತುವಾರಿ ಸಚಿವರು ಪಂಜಿನ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ, ಅಕ್ಟೋಬರ್ 2 ರಂದು ಏರ್ ಶೋ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಂತರ ಕುಸ್ತಿ ಪಂದ್ಯಾವಳಿ ನಡೆಯುವ ಸ್ಥಳ ವೀಕ್ಷಣೆ ಮಾಡಿದರು.