ಮೈಸೂರು : ಸಮಾಜದಲ್ಲಿ ತೃತೀಯ ಲಿಂಗಗಳು ಬದುಕು ಸಾಗಿಸಲು ಏನೆಲ್ಲಾ ಕಷ್ಟಪಡುತ್ತಾರೆ. ಸಮಾಜ ಅವರನ್ನು ಪ್ರತ್ಯೇಕ ಭಾವದಲ್ಲಿಯೇ ನೋಡುತ್ತದೆ. ಈ ಎಲ್ಲ ತೊಡಕುಗಳನ್ನು ಮೆಟ್ಟಿನಿಂತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದಾರೆ ತೃತೀಯ ಲಿಂಗಿಯಾದ ದೀಪಾ ಬುದ್ಧಿ. ಪಿಹೆಚ್‌ಡಿ ಮಾಡುತ್ತಿರುವ ರಾಜ್ಯದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಯೂ ಇವರದಾಗಿದೆ.
'ಈಟಿವಿ ಭಾರತ್' ಜೊತೆ ತಮ್ಮ ಬಾಲ್ಯ, ಓದು, ಜೀವನದ ಬಗ್ಗೆ ಮಾತನಾಡಿದ ದೀಪಾ ಬುದ್ಧಿ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಇದ್ದುಕೊಂಡು ಓದಬೇಕಾದರೆ ನಾನು ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಹೇಗೋ ಕಷ್ಟಪಟ್ಟು ಪದವಿ ಮುಗಿಸಿದೆ. ಬಳಿಕ ಮುಂದಿನ ವಿದ್ಯಾಭ್ಯಾಸ ಕಷ್ಟವಾಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಬಳಿಕ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕಾಗಿ ಮತ್ತೆ ಶಿಕ್ಷಣದತ್ತ ಹೊರಳಿ ಈಗ ಮೈಸೂರು ವಿವಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ ಎಂದರು.
ಅಂಬೇಡ್ಕರ್, ಬುದ್ಧ, ಬಸವಣ್ಣನವರ ತತ್ವ ಚಿಂತನೆಗಳು ನನ್ನನ್ನು ಪ್ರಭಾವಿಸಿದವು. ಅವರ ಸಾಮಾಜಿಕ ಹೋರಾಟವನ್ನು ನೋಡಿದಾಗ ನಮ್ಮ ಸಮುದಾಯದವರ ಸ್ಥಿತಿಯೂ ಕೂಡ ಹೀಗೆ ಹೋರಾಟದಲ್ಲಿ ಜೀವನ ಮಾಡುತ್ತಿದೆ. ಆದ್ದರಿಂದ ನಾನು ನಮ್ಮ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಮತ್ತೆ ಓದಲು ಪ್ರಾರಂಭಿಸಿದೆ ಎಂದರು.
ತೃತೀಯ ಲಿಂಗಿಗಳ ಮೇಲೇ ಅಧ್ಯಯನ : ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಪಿಹೆಚ್‌ಡಿ ಸಂಶೋಧನೆಯಲ್ಲಿ ತೊಡಗಿದ್ದೇನೆ. ಪಿಹೆಚ್‌ಡಿ ಅಧ್ಯಯನಕ್ಕೆ ಪ್ರೇರೇಪಿಸಿದ್ದು ಪ್ರೊ.ಸೋಮಶೇಖರ್ ಹಾಗೂ ಡಾ.ಎಸ್ ನಾರಾಯಣ್ ಅವರು. ಇವರ ಮಾರ್ಗದರ್ಶನದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.
ಗಂಡಾಗಿ ಹುಟ್ಟಿ ಹೆಣ್ಣಾದೆ : ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ ದೀಪಾ ಬುದ್ಧಿ ಅವರು, ಬಾಲ್ಯದಲ್ಲಿ ನಾನು ಗಂಡಾಗಿ ಹುಟ್ಟಿದ್ದರೂ ಬರುಬರುತ್ತಾ ತಮ್ಮ ದೇಹ ಮತ್ತು ಮನಸ್ಸಿನಲ್ಲಿ ಬದಲಾವಣೆಗಳು ಕಂಡು ಬಂದವು. ಹದಿಹರೆಯದ ವಯಸ್ಸಿಗೆ ಬಂದಾಗ ನಾನು ಹೆಣ್ಣಾಗಬೇಕು ಎಂದು ಮನಸ್ಸು ಬಯಸುತ್ತಿತ್ತು. ನನ್ನ ಮುಂದಿನ ಜೀವನ, ಕುಟುಂಬದ ಬಗ್ಗೆ ಗೊಂದಲದಲ್ಲಿದ್ದೆ. ಬಳಿಕ ನಾನು ನನ್ನ ಸಮುದಾಯವನ್ನು ಆಯ್ಕೆ ಮಾಡಿಕೊಂಡೆ ಎಂದು ವಿವರಿಸಿದರು.
ಕುಟುಂಬದ ಋಣ ದೊಡ್ಡದು : ಅಮ್ಮ ನನ್ನನ್ನು ಕೂಲಿ ಮಾಡಿ ಸಾಕಿದ್ದಾರೆ. ಒಬ್ಬನೇ ಮಗ ಅಂತಾ ತುಂಬಾ ಪ್ರೀತಿಯಿಂದ ಸಾಕಿದ್ರು. ನಾನು ಸಮುದಾಯ ಅಂತಾ ಆಚೆ ಬಂದಾಗ ಕುಟುಂಬದವರು ಒಪ್ಪಿಕೊಂಡಿರಲಿಲ್ಲ. ಜನರ ಅಪಪ್ರಚಾರ ಹಾಗೂ ಚುಚ್ಚು ಮಾತಿನಿಂದ ಹಿಂಸೆ ಅನುಭವಿಸುತ್ತಿದ್ರು. ನಾನು ಮನೆಯಿಂದ ಹೊರಬಂದೆ. ಆದರೆ, ಮನೆಯವರು ನನ್ನನ್ನು ಆಚೆ ಹಾಕಿಲ್ಲ. ಕುಟುಂಬದ ಋಣ ನನ್ನ ಮೇಲಿದೆ ಎಂದರು.
ಓದಿ: PSI ನೇಮಕಾತಿ ಹಗರಣ: ಡ್ಯಾಂಗೆ ಮೊಬೈಲ್ ಎಸೆದ ಕಿಂಗ್ಪಿನ್.. ಹುಡುಕಾಟಕ್ಕೆ ನೀರಿಗಿಳಿದ ಸಿಐಡಿ!