ಮೈಸೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೆಆರ್‌ಎಸ್ ಬಿರುಕು ವಿವಾದಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಶ್ ಮತ್ತೊಂದು ಹೇಳಿಕೆ ನೀಡಿದ್ದಾರೆ. ಕೆಆರ್‌ಎಸ್ ಬಿಟ್ಟಿದೆ ಅಂತಾ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಅಷ್ಟೇ ಎಂದು ಕೆಆರ್‌ಎಸ್ ಕಲಹ ವಿಚಾರ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ, ನಾನು ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತಾ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗಿದೆ. ನನಗೆ ಈಗಲೂ ಗಣಿಗಾರಿಕೆಯಿಂದಾಗಿ ಕೆಆರ್ಎಸ್ನಲ್ಲಿ ಬಿರುಕು ಕಾಣಿಸಿಕೊಳ್ಳುವ ಆತಂಕವಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಅವರ ಮೇಲೆ ಸಹ ಒತ್ತಡಗಳು ಇರಬಹುದು. ಆದ್ದರಿಂದ ಈ ಕುರಿತು ತನಿಖೆಯಾಗಬೇಕು. ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐಯಿಂದ ತನಿಖೆ ಮಾಡಿಸಲಿ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1,200 ಕೋಟಿ ರೂ. ನಷ್ಟವಾಗಿದೆ. ನಾನು ಗಣಿ ಸಚಿವ ಮುರುಗೇಶ್ ನಿರಾಣಿಗೆ ಎಲ್ಲವನ್ನು ಹೇಳಿದ್ದೇನೆ. ಮೊದಲು ಅವರನ್ನು ಬೇಬಿ ಬೆಟ್ಟ ಸುತ್ತಮುತ್ತಲಿನ ಗಣಿಗಾರಿಕೆ ಪ್ರದೇಶಕ್ಕೆ ಕರೆದುಕೊಂಡು ಬರುವೆ. ನಂತರ ವಸ್ತುಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವೆ ಎಂದರು.
50 ವರ್ಷ ಬಿಟ್ಟು ಕೆಆರ್‌ಎಸ್ ಒಡೆದು ಹೋದ್ರೆ ಪರವಾಗಿಲ್ವಾ?:
ಮತ್ತೊಮ್ಮೆ ಕೆಆರ್‌ಎಸ್ ಒಡೆದು ಹೋಗುವ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ, ಕೆಆರ್‌ಎಸ್ ಸುತ್ತಮುತ್ತ ಆತಂಕದ ವಾತಾವರಣವಿರುವ ಬಗ್ಗೆ ಎಲ್ಲೆಡೆ ವರದಿಯಾಗುತ್ತಿದೆ. ಈಗಾಗಲೇ ನಾನು ಕೂಡ ಸಭೆಯಲ್ಲಿ ಬಿರುಕು ಬಿಟ್ಟಿದೆಯಾ ಅಂತ ಪ್ರಶ್ನೆ ಮಾಡಿದೆ. ಈಗ ಏನೂ ಆಗಿಲ್ಲ ಅಂದ್ರೆ ಸರಿ, ಹಾಗಂತ ಇನ್ನು 10 ವರ್ಷ ಬಿಟ್ಟು ಕೆಆರ್‌ಎಸ್ ಡ್ಯಾಂ ಒಡೆದರೆ ನಿಮಗೆ ಪರವಾಗಿಲ್ವಾ?, 50 ವರ್ಷ ಬಿಟ್ಟು ಒಡೆದರೆ ಓಕೆನಾ? ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಅದನ್ನು ಹೊರಗೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಅಕ್ರಮ - ಸಕ್ರಮ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಂಪನವಾಗಿರುವುದು ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳು ಸಹ ಇವೆ. ಆದ್ದರಿಂದ ಗಣಿಗಾರಿಕೆ ನಿಲ್ಲಬೇಕು ಅಂತ ಹೋರಾಟ ಮಾಡುತ್ತಿದ್ದೇನೆ ಎಂದರು.
ಇನ್ನು ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರವನ್ನು ನಾನು ಕೇಳುತ್ತೇನೆ. ಇದಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಅಕ್ರಮ ಗಣಿಗಾರಿಕೆ ಕುರಿತು ಸಂಸದೆ ಸುಮಲತಾ ಸ್ಪಷ್ಟನೆ ನೀಡಿದರು.