ಮೈಸೂರು/ವಿಜಯಪುರ: ದೇವಸ್ಥಾನದಲ್ಲಿ ಭಕ್ತಿಗೀತೆ ಹಾಕುವವರನ್ನು ಬಂಧಿಸಿರುವುದು ಸರಿಯಲ್ಲ. ಬಿಜೆಪಿ ಸರ್ಕಾರಕ್ಕೆ ಧಿಕ್ಕಾರವಿರಲಿ, ಇದು ಪಾಕಿಸ್ತಾನ ಅಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಇಂದು ಮೈಸೂರಿನಲ್ಲಿ ಆಜಾನ್ ವಿರುದ್ಧದ ಹೋರಾಟಕ್ಕೆ ಎಲ್ಲಾ ದೇವಾಲಯಗಳಲ್ಲಿ ಮುಂಜಾನೆ ಮೈಕ್ನಲ್ಲಿ ಸುಪ್ರಭಾತ ಹಾಕುವ ಮೂಲಕ ಅವರು ಚಾಲನೆ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಸೊಕ್ಕು, ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಲ್ಲ. ಆದರೂ ಮುಸ್ಲಿಮರು ತಮ್ಮ ಹಠ ಬಿಡುತ್ತಿಲ್ಲ. ಈ ರೀತಿಯ ಹಠ ಸರಿಯಲ್ಲ. ಸಂಘರ್ಷಕ್ಕೆ ನೀವೇ ದಾರಿ ಮಾಡಿಕೊಡುತ್ತಿದ್ದೀರಿ ಎಂದರು.
ಸರ್ಕಾರದ ವಿರುದ್ಧ ಅಸಮಾಧಾನ: ಈ ಆಂದೋಲನವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುತ್ತೀರಿ. ಆದರೆ ಮಸೀದಿಗಳಿಗೆ ಯಾಕೆ ನೋಟಿಸ್ ನೀಡುವುದಿಲ್ಲ?. ಸುಪ್ರಭಾತ ಹಾಡಲು ಹೋದವರನ್ನು ಬಂಧಿಸಿದ್ದೀರಿ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು. ಮಸೀದಿ ಮೇಲಿನ ಮೈಕ್ ತೆಗೆಸಲು ಸರ್ಕಾರಕ್ಕೆ ಗಡುವು ನೀಡಿದ್ದೆವು. ಆದರೆ ಸರ್ಕಾರ ಕ್ರಮ ಜರುಗಿಸಲಿಲ್ಲ. ಹೀಗಾಗಿ ಸುಪ್ರಭಾತಕ್ಕೆ ಚಾಲನೆ ನೀಡಿದ್ದೇವೆ. ಈ ಸರ್ಕಾರದ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಬಿಜೆಪಿ ಸರ್ಕಾಕ್ಕೆ ನನ್ನ ಧಿಕ್ಕಾರವಿರಲಿ ಎಂದರು.
ಮಸೀದಿಗಳಲ್ಲಿ ಆಜಾನ್ ಕೂಗಲು ಅವಕಾಶ ಮಾಡಿ ಕೊಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡುತ್ತಿದ್ದೀರಿ. ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಗೃಹ ಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇನೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಆಜಾನ್ ವಿರುದ್ಧ ಮೊಳಗಿದ ಸುಪ್ರಭಾತ: ವಿಜಯಪುರದಲ್ಲಿ ಬೆಳಗ್ಗೆ 5ಗಂಟೆಯಿಂದ ಆಜಾನ್ ವಿರುದ್ಧ ಸುಪ್ರಭಾತ, ಭಜನಾ ಅಭಿಯಾನಕ್ಕೆ ವಿವಿಧ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ನಗರದ ಜಮಖಂಡಿ ರಸ್ತೆ ಬಳಿ ಇರುವ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಆಜಾನ್ ಆರಂಭವಾಗುವ ವೇಳೆ ಸುಪ್ರಭಾತ, ಭಕ್ತಿಗೀತೆ ಮೊಳಗಿತು.
ಇದನ್ನೂ ಓದಿ: ದೇಗುಲಗಳಲ್ಲಿ ಭಜನೆ, ಸುಪ್ರಭಾತ; ಬೆಳಗಾವಿಯ 500ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ