ಮೈಸೂರು : ಜೆಡಿಎಸ್ ಯಾರ ಹಾಗೂ ಯಾವ ಕುಟುಂಬದ ಹಿಡಿತದಲ್ಲಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರ ಟ್ವೀಟ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಕಿಡಿಕಾರಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಿದ್ದಸೂತ್ರ ಕಾಂಗ್ರೆಸ್ ಫ್ಯಾಮಿಲಿ ಎಂಬ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಜೆಡಿಎಸ್ ಯಾರ ಹಾಗೂ ಯಾವ ಕುಟುಂಬದ ಹಿಡಿತದಲ್ಲಿದೆ ಎಂದು ರಾಜ್ಯದ ಹಾಗೂ ದೇಶದ ಜನತೆಗೆ ಗೊತ್ತು. ಅವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಹೇಳುವುದು. ಇದು ಸ್ವಾಭಾವಿಕ ವಿಚಾರ ಎಂದರು.
ನನಗೆ ಯಾರ ಮೇಲೂ ದ್ವೇಷವಿಲ್ಲ: ನನಗೆ ಯಾರ ಮೇಲೂ ಕೂಡ ದ್ವೇಷ ಇಲ್ಲ. ಬಿ.ಎಸ್ ಯಡಿಯೂರಪ್ಪರ ಮೇಲೂ ದ್ವೇಷ ಇಲ್ಲ. ಸಮಸ್ಯೆ ಮೇಲೆ ಮಾತನಾಡಬೇಕು. ಕುಮಾರಸ್ವಾಮಿ ಕಾಲದಲ್ಲಿ ಒಂದು ಮನೆಯನ್ನಾದರೂ ನೀಡಿದ್ದರೆ ಹೇಳಲಿ ಎಂದು ಪ್ರಶ್ನಿಸಿದರು.
ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ನನಗೂ ವೈಯಕ್ತಿಕವಾಗಿ ಯಾವ ದ್ವೇಷವೂ ಇಲ್ಲ. ರಾಜ್ಯದಲ್ಲಿರುವ ಸಮಸ್ಯೆಗಳ ಮೇಲೆ ಭಿನ್ನಾಭಿಪ್ರಾಯ, ಸಿದ್ಧಾಂತದ ಮೇಲೆ ಭಿನ್ನಾಭಿಪ್ರಾಯ ಇದೆ ಅಷ್ಟೇ.. ಒಂದು ಹಂತದಲ್ಲಿ ಅವರು ನಾವು ಸೆಕ್ಯುಲರ್ ಪಾರ್ಟಿ ಎನ್ನುತ್ತಾರೆ. ಹಾಗಾದರೆ, ಬಿಜೆಪಿ ಜೊತೆ ಸೇರಿ ಏಕೆ ಸರ್ಕಾರ ಮಾಡಿದರು. ಒಂದು ಕಡೆ ಆರ್ಎಸ್ಎಸ್ ಬೈಯುತ್ತೀರಿ, ಇನ್ನೊಂದು ಕಡೆ ಅವರ ಜೊತೆ ಸೇರಿಕೊಳ್ಳುತ್ತೀರಿ ಎಂದರು.
ಸಂಸದ ಶ್ರೀನಿವಾಸ್ ಪ್ರಸಾದ್ಗೆ ನೈತಿಕತೆ ಇಲ್ಲ: ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡರದ್ದು ಅಪಹಾಸ್ಯದ ಮೈತ್ರಿ ಎಂಬ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಅವರಿಂದ ಕಲಿಯಬೇಕಾ? ಕೋಮುವಾದಿ ಪಕ್ಷದ ಜೊತೆ ಸೇರಿಕೊಂಡು, ಅವರು ಇನ್ನೊಂದು ಪಕ್ಷದವರ ಬಗ್ಗೆ ಟೀಕೆ ಮಾಡಲು ನೈತಿಕತೆ ಇಲ್ಲ.
ಅಂಬೇಡ್ಕರ್ ಹೇಳಿದ್ರಾ ಬಿಜೆಪಿ ಕೋಮುವಾದಿಗಳ ಜೊತೆ ಸೇರಿಕೊಳ್ಳಿ ಎಂದು? ಅವರಿಗೆ ಯಾವ ನೈತಿಕತೆ ಇದೆ. ಅವರಿಂದ ನಾನು ಪಾಠ ಕಲಿಯಬೇಕೆ? ಎಂದು ಪ್ರಶ್ನಿಸಿದರು. ಈ ವೇಳೆ ಅವರ ಆರೋಗ್ಯ ಚೆನ್ನಾಗಿಲ್ಲ. ಅವರು ಅನಾರೋಗ್ಯದಿಂದ ಬೇಗ ಗುಣಮುಖರಾಗಲಿ, ಜಾಸ್ತಿ ದಿನ ಬದುಕಲಿ ಎಂದು ಹಾರೈಸಿದರು.
ಇದನ್ನೂ ಓದಿ: 'ಚಾಮುಂಡೇಶ್ವರಿ ಕ್ಷೇತ್ರದ ತಿರಸ್ಕೃತ, ಸುಳ್ಳು ಸ್ಲೋಗನ್ಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ'
ಮೇಕೆದಾಟು ಯೋಜನೆಗೆ ಬಿಪಿಆರ್ ಮಾಡಿದ್ದೇ ನಮ್ಮ ಸರ್ಕಾರ. ಕೇಂದ್ರ ಸರ್ಕಾರದ ಎನ್ವಾರ್ನಮೆಂಟ್ ಕ್ಲಿಯರೆನ್ಸ್‌ಗೆ ಕೊಟ್ಟಿದ್ದು ನಮ್ಮ ಸರ್ಕಾರ. ಈಗ ಅದು ವಿಳಂಬ ಆಗುತ್ತಿದೆ. ಅದಕ್ಕೆ ಯಾವ ತಕರಾರು ಇಲ್ಲ. ಬೇಗ ಪ್ರಾರಂಭ ಮಾಡಿ ಎಂದು ಒತ್ತಾಯಿಸಲು ಮೇಕೆದಾಟುವಿನಿಂದ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ.
ಅದರಲ್ಲಿ ನಾನು ಸೇರಿದಂತೆ ಡಿ.ಕೆ.ಶಿವಕುಮಾರ್, ಧ್ರುವನಾರಾಯಣ್ ಎಲ್ಲರೂ ಇದ್ದಾರೆ. ನಾನು ಹಾಗೂ ಡಿ.ಕೆ.ಶಿವಕುಮಾರ್ ಅನ್ಯೋನ್ಯತೆಯಿಂದ ಇದ್ದೇವೆ. ಭಿನ್ನಾಭಿಪ್ರಾಯ ಇದೆ ಎಂಬುದನ್ನು ಉದಾಹರಣೆ ಹಾಗೂ ದಾಖಲೆ ಸಮೇತ ಹೇಳಬೇಕು. ಯಾರು ಬೇಕಾದರೂ ಅಭಿಪ್ರಾಯ ಹೇಳಲು ಕಾಂಗ್ರೆಸ್ನಲ್ಲಿ ಮುಕ್ತವಾದ ವಾತಾವರಣ ಇದೆ ಎಂದರು.
ಮತಾಂತರ ನಿಷೇಧ ಕಾಯ್ದೆಗೆ ವಿರೋಧ : ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆ ಅನಗತ್ಯ. ಜನರ ಅಸಮಾಧಾನ ತಿಳಿದು ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಯಾವುದೇ ಮತವನ್ನು ಅನುಸರಿಸಲು ಮುಕ್ತವಾದ ಅವಕಾಶ ಇದೆ. ಬಲವಂತವಾಗಿ ಮತಾಂತರ ಮಾಡಿದರೆ ಕ್ರಮಕೈಗೊಳ್ಳಲಿ. ಮುಸ್ಲಿಂ ಹಾಗೂ ಕ್ರೈಸ್ತರನ್ನು ಮುಖ್ಯವಾಗಿಟ್ಟುಕೊಂಡು ಈ ಕಾಯ್ದೆ ತರಲು ಹೊರಟಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ : ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.