ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿಯಿಂದ ಮನನೊಂದ ಅಭಿಮಾನಿಯೊಬ್ಬ ಶ್ರದ್ಧಾಂಜಲಿ ಮೆರವಣಿಗೆಯ ನಂತರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ.
ಅಶೋಕ್ (40) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತ ಕೆ.ಆರ್.ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಅಪ್ಪು ಅಭಿಮಾನಿಯಾಗಿದ್ದ. ಇಂದು ಪಟ್ಟಣದಲ್ಲಿ ಶ್ರದ್ಧಾಂಜಲಿ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿ ಹಾದು ಹೋಗುವ ಮಾರ್ಗದಲ್ಲಿರುವ ಹೊಸ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಪೊಲೀಸರು ಹಾಗು ಅಗ್ನಿಶಾಮಕ ದಳ ಸಿಬ್ಭಂದಿ ಆಗಮಿಸಿ ಅಶೋಕ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ನಿನ್ನೆ (ಶುಕ್ರವಾರ) ಪವರ್ ಸ್ಟಾರ್ ನಿಧನದಿಂದ ದುಃಖಿತನಾಗಿದ್ದ ಈತ ವಿಪರೀತ ಮದ್ಯ ಸೇವನೆ ಮಾಡಿದ್ದ ಎನ್ನಲಾಗ್ತಿದೆ.
ಇಂದು ನಗರದಲ್ಲಿ ನಡೆದ ಪುನೀತ್ ಶ್ರದ್ಧಾಂಜಲಿ ಸಭೆ ಹಾಗು ಆಟೋ ಶ್ರದ್ಧಾಂಜಲಿ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಬಾರದಲೋಕಕ್ಕೆ ತೆರಳಿದ್ದಾನೆ. ಕುಟುಂಬದವರು ದೂರು ನೀಡಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಅಪ್ಪ ಪುನೀತ್ ತಲೆ ಸವರಿ ಮುತ್ತು ಕೊಟ್ಟ ಪುತ್ರಿ ಧೃತಿ.. ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ..