ಮೈಸೂರು: ಬಹುತೇಕ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಆದರೆ ಇತರೆ ಕಾಯಿಗಳಿರುವ ರೋಗಿಗಳ ಸ್ಥಿತಿ ಮಾತ್ರ ಕೋವಿಡ್ ಸೋಂಕಿತರಿಗಿಂತಲೂ ಭೀಕರವಾಗಿದೆ. ಇದಕ್ಕೆ ನೈಜ ಉದಾಹರಣೆ ಎಂಬಂತಿದೆ ಮೈಸೂರಿನಲ್ಲಿ ಚಿತ್ರಣ.
ಮೈಸೂರು ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಇದರಿಂದ ಭಯಗೊಂಡ ಸೋಂಕಿತರು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್ ಹಾಕಲಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಮತ್ತಷ್ಟು ಶೋಚನಿಯವಾಗಿದೆ.
ಇಲ್ಲಿ ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ, ಸರಿಯಾದ ಚಿಕಿತ್ಸೆಯೂ ಇಲ್ಲ ಎಂಬ ಆರೋಪಗಳ ನಡುವೆಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ಗಳು ಸಹ ಸಿಗದೆ ಜನರು ಪರದಾಡುತ್ತಿದ್ದಾರೆ.
ಇದು ಒಂದು ಕಡೆಯಾದರೆ ನಗರದ ಕೆ.ಆರ್.ಆಸ್ಪತ್ರೆಯ ಒಳಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಇದರಿಂದ ಹೃದಯ ಸಮಸ್ಯೆಗೆ ಒಳಗಾದ ವ್ಯಕ್ತಿವೋರ್ವನನ್ನು ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆ ವ್ಯಕ್ತಿಯನ್ನು ಆಸ್ಪತ್ರೆ ಒಳಗಡೆ ಬಿಡದೆ ಹೊರಭಾಗದಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಮತ್ತೊಂದೆಡೆ ಅವರನ್ನು ಬದುಕಿಸಿಕೊಡುವಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೃದಯ ರೋಗ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದರಿಂದ ಯಾವ ರೀತಿ ತೊಂದರೆಯಾಗಿದೆ ಎಂಬುದನ್ನು ವಿವರಿಸುತ್ತಾರೆ ರೋಗಿಯ ಸಂಬಂಧಿಕ ಬೀರೇಗೌಡ.
ಹೀಗೆ ಹೃದಯ ಸಮಸ್ಯೆಗೆ ಸಂಬಂಧಿಸಿದ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದರೆ ಆಗುವ ಅನಾನುಕೂಲಗಳೇನು ಎಂಬುದಕ್ಕೆ ಈ ಸ್ಟೋರಿ ನಿದರ್ಶನವಾಗಿದೆ.