ಮೈಸೂರು : ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಾಂಡವಪುರ ಬಳಿ ಹೆದ್ದಾರಿ ರಸ್ತೆ ಗುಂಡಿ ಬಿದ್ದಿದ್ದು, ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ಶಾಸಕರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಮಳೆಯಾಗುತ್ತಿರುವುದರಿಂದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ತಾಂಡವಪುರ ಬಳಿ ರಸ್ತೆ ಗುಂಡಿ ಬಿದ್ದಿವೆ. ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ಗುಂಡಿ ತುಂಬಿದ್ದರಿಂದ ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ರಸ್ತೆ ಕೆರೆಯಂತಾಗಿದೆ. ಇದರಿಂದಾಗಿ ಪ್ರತಿನಿತ್ಯ ವಾಹನ ಸವಾರರು ಪ್ರಾಣ ಭೀತಿಯಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದೂ ಕೂಡ ರಸ್ತೆ ಸರಿಪಡಿಸುವ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದಾಗಿ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೇ ಕಡಕೋಳ ರೈಲ್ವೆ ಕೆಳ ಸೇತುವೆ ಮೇಲಿನ ತಡೆಗೋಡೆ ಕುಸಿದು ಅಲ್ಲಿಯ ಕಲ್ಲು ಮಣ್ಣು ಗಿಡ ಗಂಟೆಗಳು ಸಹ ರಸ್ತೆಗೆ ಬಿದ್ದಿವೆ. ಇದನ್ನು ಸಹ ತೆರವುಗೊಳಿಸದೆ ಇರುವುದರಿಂದ ವಾಹನ ಸವಾರರಿಗೆ, ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯುಂಟಾಗಿದೆ.
ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ ಕಲ್ಪಿಸದಿದ್ದರೂ, ರಾಷ್ಟ್ರೀಯ ಹೆದ್ದಾರಿಯ ಶುಲ್ಕ ಮಾತ್ರ ನಿರಂತರವಾಗಿ ವಸೂಲಿಯಾಗುತ್ತಿದೆ. ರಸ್ತೆ ನಿರ್ವಹಣೆ ಉದ್ದೇಶದಿಂದಲೇ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ರಸ್ತೆ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪ.
ಈ ಕುರಿತು ಮಾತನಾಡಿರುವ ನಂಜನಗೂಡಿನ ಶಾಸಕ ಹರ್ಷವರ್ಧನ್, ಇತ್ತೀಚೆಗೆ ಮಳೆ ಜಾಸ್ತಿಯಾಗಿದೆ. ಈಗಾಗಲೇ ಪಿಡಬ್ಲ್ಯೂಡಿ ಇಂಜಿನಿಯರ್ ಗಮನಕ್ಕೆ ತಂದಿದ್ದೇನೆ. ರಾಷ್ಟ್ರೀಯ ಹೆದ್ದಾರಿಗೆ ಸೇರುವುದರಿಂದ ಅವರಿಗೂ ತಿಳಿಸಿದ್ದೇನೆ. ಡಾಂಬರೀಕರಣ ಮಾಡಬೇಕು. ಹಾಗಾಗಿ, ಅಧಿಕಾರಿಗಳು ಮಳೆ ನಿಂತು ಹೋದ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಇನ್ನೊಮ್ಮೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಜತೆ ಮಾತನಾಡಿ ಕೂಡಲೇ ದುರಸ್ತಿಗೊಳಿಸಲು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.