ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಆಗಸ್ಟ್ 24ರ ಮಂಗಳವಾರ ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಈ ಸಂಬಂಧ ಹಲ್ಲೆಗೊಳಗಾಗಿದ್ದ ಸಂತ್ರಸ್ತೆಯ ಸ್ನೇಹಿತ ನೀಡಿದ ಮಾಹಿತಿ ಆಧಾರದ ಮೇಲೆ ಆ ಭಾಗದಲ್ಲಿ ಮೊಬೈಲ್ ಟವರ್ ಸಿಗ್ನಲ್ ಆಧಾರದ ಮೇಲೆ ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಪ್ರತಿನಿತ್ಯ ಮದ್ಯಪಾನ ಮಾಡಲು ಬರುತ್ತಿದ್ದ ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಅದಲ್ಲದೇ ವಿದ್ಯಾರ್ಥಿನಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜಿನ ಕೆಲವು ಸಹಪಾಠಿಗಳಿಂದ ಮಾಹಿತಿ ಪಡೆದಿದ್ದರು. ಮಾರನೇ ದಿನ ನಾಲ್ಕು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಅವರನ್ನು ಸಹ ಹುಡುಕಲು ಹೊರ ರಾಜ್ಯಗಳಿಗೆ ಹೋದಾಗ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಆ ನಂತರ ಘಟನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು ವಿಚಾರಣೆ ಕೈಗೊಂಡಾಗ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐದು ಜನ ಭಾಗಿಯಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಸಂತ್ರಸ್ತೆ ಹೇಳಿಕೆ ನೀಡಿಲ್ಲ
ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಸಂತ್ರಸ್ತೆ ಇನ್ನೂ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಜೊತೆಗೆ ಘಟನೆಯ ದಿನ ಜೊತೆಯಲ್ಲಿದ್ದ ಸ್ನೇಹಿತ ಸಹ ಹಲ್ಲೆಗೊಳಗಾಗಿದ್ದು, ಆತ ಸಹ ಪೊಲೀಸರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಘಟನೆ ನಡೆದ ಸ್ಥಳದಿಂದ ಆ ರಾತ್ರಿ ಯುವಕ ಮತ್ತು ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆತಂದವರು ಯಾರು ಎಂಬ ಬಗ್ಗೆ ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಇದರ ಜೊತೆಗೆ ಸಂತ್ರಸ್ತೆಯ ಕುಟುಂಬದವರು ನಾವು ಯಾವುದೇ ದೂರನ್ನು ನೀಡುವುದಿಲ್ಲ ಎಂದು ಹೇಳುತ್ತಿದ್ದು, ನಾವು ನಮ್ಮ ರಾಜ್ಯಕ್ಕೆ ಹೋಗುತ್ತೇವೆ ಎಂದು ಪೊಲೀಸರಲ್ಲಿ ಮನವಿ ಮಾಡುತ್ತಿದ್ದು, ಇದೂ ಸಹ ತನಿಖೆಗೆ ಅಡ್ಡಿಯಾಗಿದೆ.
ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಹೊರ ರಾಜ್ಯದಿಂದ ಕರೆತಂದು ವಿಚಾರಣೆ ನಡೆಸುತ್ತಿದ್ದು, ಈ ಆರೋಪಿಗಳ ಗುರುತನ್ನು ಪತ್ತೆ ಹಚ್ಚಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ಪೋಟೋ ಮೂಲಕ ತೋರಿಸಿ ಖಚಿತಪಡಿಸಿಕೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ.
ಈ ಘಟನೆಯ ಬಗ್ಗೆ ಇಂದು ಸಂಜೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪೊಲೀಸರು ಬಂಧಿಸಿದವರ ಪೈಕಿ ಅತ್ಯಾಚಾರ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಲಿದೆ.
ಇದನ್ನೂ ಓದಿ: ರಾಜ್ಯದ ಅತ್ಯಾಚಾರ ಪ್ರಕರಣಗಳ ಸಂಕ್ಷಿಪ್ತ ವರದಿ.. 2019ರಲ್ಲೇ ಅತಿ ಹೆಚ್ಚು ಕೇಸ್