ಮೈಸೂರು : ತರಕಾರಿ ಮತ್ತು ಹಣ್ಣುಗಳು ಬೇಗನೇ ಹಾಳಾಗುವುದು ಮಾರಾಟಗಾರರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಇಂತಹ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿ, ಅವರಿಗೆ ಕೈಗೆಟಕುವ ದರದಲ್ಲಿ ಕಾಲೇಜು ವಿದ್ಯಾರ್ಥಿಗಳು ವಿನೂತನವಾಗಿ ಶಿಥಿಲೀಕರಣ ವ್ಯವಸ್ಥೆಯುಳ್ಳ ತಳ್ಳುವ ಗಾಡಿಯನ್ನು ಆವಿಷ್ಕಾರ ಮಾಡಿದ್ದಾರೆ.
ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಶಿಥಿಲೀಕರಣ ವ್ಯವಸ್ಥೆಯುಳ್ಳ ತಳ್ಳುವ ಗಾಡಿಯನ್ನು ಆವಿಷ್ಕಾರ ಮಾಡಿದ್ದು, ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸುಡುಬಿಸಿಲಿನಲ್ಲಿ ತರಕಾರಿ ಹಾಗೂ ಹಣ್ಣುಗಳನ್ನ ಹೆಚ್ಚುಕಾಲ ತಾಜಾವಾಗಿಡಲು ಇದು ಸಹಕಾರಿಯಾಗಲಿದೆ.
ಈ ತಳ್ಳುಗಾಡಿಯ ವಿಶೇಷತೆಗಳೇನು?:
- ಬಂಡಿಯಲ್ಲಿ ಸೋಲಾರ್ ಫಲಕವನ್ನ ಅಳವಡಿಸಲಾಗಿದ್ದು, ಸೌರಶಕ್ತಿಯಿಂದ ಇದು ಕಾರ್ಯನಿರ್ವಹಿಸುತ್ತದೆ.
- ಒಮ್ಮೆ ವಿದ್ಯುತ್ ಬಳಸಿ ಚಾರ್ಜ್ ಮಾಡಿದರೆ ಸಾಕು ಬಳಿಕ ವಿದ್ಯುತ್‌ನ ಅಗತ್ಯತೆಗಳಿಗೆ ಬದಲಾಗಿ ಸೌರಶಕ್ತಿಯನ್ನ ಅವಲಂಬಿಸಲಿದೆ.
- ಗಾಡಿಯಲ್ಲಿ 40 ರಿಂದ 50 ಕೆಜಿ ತರಕಾರಿಯನ್ನ ಶೇಖರಿಸಿಡಬಹುದು.
ತರಕಾರಿಯನ್ನ ತಾಜಾವಾಗಿಡಲು 5-0 ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಅಗತ್ಯವಿದ್ದು, ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ಡೈರಿ ಉತ್ಪನ್ನಗಳನ್ನ ಮಾರಾಟ ಮಾಡಲು ಬಯಸುವ ವ್ಯಾಪಾರಸ್ಥರಿಗೂ ಕೂಡ ಉಪಯೋಗವಾಗುವ ರೀತಿ ಶಿಥಿಲೀಕರಣ ವ್ಯವಸ್ಥೆಯನ್ನು 0 ಯಿಂದ 10 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ನಿರ್ವಹಿಸುವ ರೀತಿ ವಿನ್ಯಾಸಗೊಳಿಸಲಾಗಿದೆ.
ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹೆಚ್ ವಿ ನವೀನ್ ಅವರ ನೇತೃತ್ವದಲ್ಲಿ ಹಾಗೂ ಮುಖ್ಯಸ್ಥರಾದ ಪ್ರೊ. ಪಿ ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಹೆಚ್ ವಿ ನವೀನ್, ಎಸ್.ಸುಪ್ರೀತ್ ಮತ್ತು ವಿವೇಕ್, ಚಂದ್ರಶೇಖರ್ ಈ ವಿನೂತನ ತಳ್ಳುಗಾಡಿಯನ್ನ ಆವಿಷ್ಕರಿಸಿದ್ದಾರೆ.
ಈ ಗಾಡಿಯನ್ನ ವಿನ್ಯಾಸಗೊಳಿಸಲು 52 ಸಾವಿರ ವೆಚ್ಚ ತಗುಲಿದೆ. ಇದೇ ರೀತಿಯ ಸೌಲಭ್ಯ ಹೊಂದಿರುವ ತಳ್ಳುಗಾಡಿಯನ್ನ ಮಾರುಕಟ್ಟೆಯಲ್ಲಿ ಖರೀದಿಸಲು ಒಂದು ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ.
ಈ ಗಾಡಿಗೆ ಚಿಕ್ಕದಾದ ಚಕ್ರಗಳನ್ನ ಬಳಸಿದ್ದು, ಗಾಡಿಯನ್ನ ತಳ್ಳುವ ಅಥವಾ ಪೆಡಲ್ ಮಾಡುವ ವ್ಯಕ್ತಿ ಹೆಚ್ಚಿನ ಶ್ರಮ ಹಾಕಬೇಕು. ಆದ್ದರಿಂದ ದೊಡ್ಡಗಾತ್ರದ ಚಕ್ರವನ್ನ ಬಳಸಿ ಸುಧಾರಿತ ಗಾಡಿಯನ್ನ ತಯಾರಿಸುವ ಯೋಚನೆಯಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯಮ ಸ್ಥಾಪಿಸಲು ಸಬ್ಸಿಡಿ : ಸಚಿವ ಮುರುಗೇಶ್ ನಿರಾಣಿ