ಮೈಸೂರು: ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯದ 'ಮೈಸೂರು ಸಿಟಿ ಸ್ಕೂಲ್ ಆಫ್ ಲಾ' ನಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕಾನೂನು ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿದೆ.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ ಸಭೆಯಲ್ಲಿ ಸದಸ್ಯರ ಸಲಹೆಯ ಮೇರೆಗೆ ಹಲವಾರು ಚರ್ಚೆಗಳನ್ನು ನಡೆಸಿ ನಂತರ ಕನ್ನಡದಲ್ಲಿ ಕಾನೂನು ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲು ತೀರ್ಮಾನ ಮಾಡಲಾಗಿದೆ.
ಹೀಗಿತ್ತು ಚರ್ಚೆ..
ವಿದ್ಯಾರ್ಥಿ ಪ್ರತಿನಿಧಿಯಾಗಿ ಶಿಕ್ಷಣ ಮಂಡಳಿಗೆ ನಾಮ ನಿರ್ದೇಶನಗೊಂಡಿರುವ ಎಂ.ಸಿ. ರಾಜಶೇಖರ ಮಾತನಾಡಿ, ಕಾನೂನು ಓದುವ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ.
ಇಂಜಿನಿಯರಿಂಗ್, ಮೆಡಿಕಲ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ಎಷ್ಟೋ ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪನ್ನು ಬರೆಯುತ್ತಾರೆ. ಹೀಗಿದ್ದರು ಕಾನೂನು ಪರೀಕ್ಷೆಗೆ ಮಾತ್ರ ಇಂಗ್ಲಿಷ್ ಭಾಷೆ ಯಾಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರೊ. ರಮೇಶ್, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಬೋಧನೆಯನ್ನು ಕನ್ನಡದಲ್ಲಿ ಮಾಡುವಂತೆ ಒತ್ತಾಯ ಬರುತ್ತದೆ. ಇದರಿಂದದಾಗಿ ಬೇರೆ ರಾಜ್ಯದ ಮತ್ತು ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ ಕಾನೂನು ವಿಷಯದಲ್ಲಿ ಕನ್ನಡ ಪಠ್ಯಪುಸ್ತಕಗಳ ಕೊರತೆ ಇದೆ.
ಕೇವಲ 4 ರಿಂದ 5 ಪುಸ್ತಕಗಳು ಮಾತ್ರ ಲಭ್ಯವಿದ್ದು ಅನುವಾದ ಸರಿಯಾಗಿ ಆಗಿಲ್ಲ. ಇಂತಹ ಪುಸ್ತಕಗಳ ಅಧ್ಯಯನದಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಕಡಿಮೆಯಾಗುತ್ತದೆ. ಜೊತೆಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳು ಇಂಗ್ಲಿಷ್ನಲ್ಲಿ ಇರುತ್ತವೆ. ಹಾಗಾಗಿ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಕಷ್ಟ. ಹಾಗಾಗಿ ಇಂಗ್ಲಿಷ್ನಲ್ಲೆ ಬೋಧನೆ ಮತ್ತು ಪರೀಕ್ಷೆ ನಡೆಯುತ್ತದೆ ಎಂದು ಪ್ರೊ. ರಮೇಶ್ ಹೇಳಿದರು.
ಇದನ್ನೂ ಓದಿ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಮುಂದಿನ ಅಧಿವೇಶನದಲ್ಲಿ 'ಮತಾಂತರ' ವಿಧೇಯಕ ಮಂಡನೆ
ಇದಕ್ಕೆ ಶಿಕ್ಷಣ ಮಂಡಳಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹೊರ ರಾಜ್ಯ ಮತ್ತು ದೇಶಗಳಿಂದ ಬರುವ ಶೇ.20ರಷ್ಟು ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಈ ವೇಳೆ, ಮಧ್ಯಪ್ರವೇಶಿಸಿದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಕಾನೂನು ಕೋರ್ಸ್ಗಳ ಬೋಧನೆ ಇಂಗ್ಲಿಷ್ನಲ್ಲಿ ನಡೆಯುತ್ತದೆ. ಆದರೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಒಮ್ಮೆ ಕರ್ನಾಟಕ ವಿಶ್ವ ವಿದ್ಯಾನಿಲಯದ ನಿಯಮಗಳನ್ನ ನೋಡಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.