ಮೈಸೂರು: ಸಾಮಾನ್ಯ ಜನರ ನಡುವೆ ಕೆಲವೊಮ್ಮೆ ಅಸಾಮಾನ್ಯ ವ್ಯಕ್ತಿಗಳು ಕಂಡು ಬರುತ್ತಾರೆ ಎಂಬುದಕ್ಕೆ ಮೈಸೂರಿನ ಟ್ರಾಫಿಕ್ ವಾರ್ಡನ್ ಒಬ್ಬರು ಸಾಕ್ಷಿಯಾಗಿದ್ದಾರೆ.
ಹೌದು, ಮಹೇಶ್ವರ ಎಂಬುವರು ಕಳೆದ 34 ವರ್ಷಗಳಿಂದ ಯಾವುದೇ ಸಂಬಳ ಪಡೆಯದೇ ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಜೆ 4 ಗಂಟೆ ಆಗುತ್ತಿದ್ದಂತೆ ಮಹೇಶ್ವರ (77) ಅವರು ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗುವ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ನ ಸಿಗ್ನಲ್ ಬಳಿ ಬಂದು ನಿಂತು ಕೈಸನ್ನೆ ಮೂಲಕವೇ ತಮ್ಮ ಕೆಲಸವನ್ನು ಚುರುಕಾಗಿ ನಿರ್ವಹಿಸುತ್ತಾರೆ. ಇವರು ಕಳೆದ 34 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದು, ನಗರಕ್ಕೆ ಯಾವುದೇ ಹೊಸ ಪೊಲೀಸ್ ಅಧಿಕಾರಿಗಳು ಬಂದರೂ ಇವರನ್ನು ಗುರುತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾರೆ.
ಜನರಿಗೆ ಉಪಯೋಗವಾಗಲಿ ಎಂಬ ಕಾರಣದಿಂದ ನಾನು ಈ ಕೆಲಸ ಮಾಡುತ್ತಾ ಬಂದಿದ್ದೇನೆ. ಕಳೆದ 34 ವರ್ಷಗಳಿಂದ ಸಂಬಳ ಪಡೆಯದೇ ಉಚಿತವಾಗಿ ಕೆಲಸ ಮಾಡುತ್ತಿದ್ದೇನೆ. ಜೀವನ ನಿರ್ವಹಣೆಗಾಗಿ ಇನ್ಶುರೆನ್ಸ್ ಕಂಪನಿಯಲ್ಲಿ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಸಂಜೆ ಟ್ರಾಫಿಕ್ ವಾರ್ಡನ್ ಕೆಲಸ ಮಾಡುತ್ತಿದ್ದೇನೆ ಎಂದು ಮಹೇಶ್ವರ ತಿಳಿಸಿದ್ದಾರೆ.
ಇನ್ನು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದು, ಈ ವಯಸ್ಸಿನಲ್ಲಿಯೂ ಸಮಯ ವ್ಯರ್ಥ ಮಾಡದೇ ಬೇರೆಯವರಿಗೆ ಸಹಾಯ ಮಾಡುತ್ತಿರುವ ಇವರ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.