ಮೈಸೂರು: ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಸ್ತೆಬದಿಯಲ್ಲಿರುವ ಎಲ್ಲಾ ಟೀ ವ್ಯಾಪಾರ ಅಂಗಡಿಗಳನ್ನು ಗುರುವಾರದಿಂದ ಮುಂದಿನ ಆದೇಶದವರೆಗೆ ಮುಚ್ಚುವಂತೆ ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ನಗರದ ಟೀ ಅಂಗಡಿಗಳಲ್ಲಿ ಹಾಗೂ ಫುಟ್‌ಪಾತ್‌ನ ಟೀ ವ್ಯಾಪಾರ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅನಗತ್ಯವಾಗಿ ಗುಂಪು ಸೇರಿ ಬೀಡಿ ಸಿಗರೇಟ್ ಸೇವನೆ ಮಾಡುತ್ತಿದ್ದರು.
![mysore-city-corporation-stopped-street-side-business](https://etvbharatimages.akamaized.net/etvbharat/prod-images/kn-mys-03-mcc-order-vis-ka10003_16072020192047_1607f_1594907447_511.jpg)
ಅಲ್ಲದೇ ಈ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಅನ್ನು ಸಹ ಹಾಕಿಕೊಳ್ಳದೇ ಬೇಜವಾಬ್ದಾರಿತನ, ಜೊತೆಗೆ ಹೆಚ್ಚಿನ ವ್ಯಾಪಾರಸ್ಥರು ವ್ಯಾಪಾರ ಸ್ಥಳದಲ್ಲಿ ಶುಚಿತ್ವಕ್ಕೆ ಕಾಪಾಡದೇ ಇರುವುದು ಗೊತ್ತಾಗಿದೆ.
ಈ ಕಾರಣದಿಂದ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಗುರುವಾರದಿಂದ (ಜುಲೈ 16ರಿಂದ) ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಗರದ ಎಲ್ಲ ಟೀ ಅಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ಹಾಗೂ ಎಲ್ಲ ಫುಟ್‌ಪಾತ್ ಟೀ ಅಂಗಡಿಗಳನ್ನು ಸಹ ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.