ಮೈಸೂರು : ಕೆಲವು ಬೆಳವಣಿಗೆಗಳಿಂದ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಹಿತೈಷಿಗಳ ಸಲಹೆ ಸೂಚನೆಯಂತೆ 08, 10 ದಿನಗಳ ಕಾಲ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಸುತ್ತೂರು ಮಠದಲ್ಲಿ ಹೇಳಿಕೆ ನೀಡಿದ್ದಾರೆ.
ಓದಿ: 7 ಬಾರಿ ಗರ್ಭಪಾತ.. ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಗೆ ವಿಷವುಣಿಸಿದ ಪ್ರಿಯಕರ
ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವ ಸಣ್ಣ ಮನುಷ್ಯ ನಾನಲ್ಲ. ಸರ್ಕಾರ ತೆಗೆದು ಹೊಸ ಸರ್ಕಾರ ಮಾಡುವ ಶಕ್ತಿ ನಮಗೆ ಇದೆ. ನಾನು ಬೇರೆಯವರನ್ನು ಮಂತ್ರಿ ಮಾಡುವ ಶಕ್ತಿಯನ್ನ ದೇವರು ನನಗೆ ಕೊಟ್ಟಿದ್ದಾನೆ. ಆದರೆ, ಮಂತ್ರಿ ಸ್ಥಾನಕೋಸ್ಕರ ನಾನು ಲಾಬಿ ಮಾಡುವ ಸಣ್ಣ ಮನುಷ್ಯ ನಾನಲ್ಲ ಎಂದರು.
ಇನ್ನೂ ಒಂದು ವಾರ ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ. ನಾನು ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ, ನನ್ನ ಕೆಲವು ಹಿತೈಷಿಗಳ ಸಲಹೆ ಮೇರೆಗೆ ಹಿಂದೆ ಸರಿದಿದ್ದೇನೆ. ಮುಂದೆ ಎಂಟತ್ತು ದಿನಗಳ ನಂತರ ನೋಡೋಣ ಎಂದ ಶಾಸಕ ರಮೇಶ್ ಜಾರಕಿಹೊಳಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆ.
ಕಾಂಗ್ರೆಸ್‌ನವರು ಸಿಎಂ ಸ್ಥಾನ ನೀಡುತ್ತೇನೆ ಎಂದರೂ ನಾನು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನನ್ನು ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಹಾಗೂ ಆರ್ಎಸ್ಎಸ್ನ ಮುಖಂಡರು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಇದರಲ್ಲಿ ನಾನು ಬಿಜೆಪಿ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು ಎಂದು ಟೀಕಿಸಿದರು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ನಮ್ಮ ಗಾಡ್ ಫಾದರ್, ಅದಕ್ಕೆ ಅವರನ್ನು ಬಾಂಬೆಯಲ್ಲಿ ಭೇಟಿಯಾಗಿದ್ದೆ. ಇನ್ನೂ ಎಂಟತ್ತು ದಿನಗಳ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ಯಡಿಯೂರಪ್ಪ 2 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ.
2 ವರ್ಷದ ನಂತರ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಗಳಾಗುತ್ತಾರೆ ಎಂಬ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ತಿಳಿಸಿದರು.