ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ನಡುವೆ ಮಾತಿನ ಸಮರ ತಾರಕಕ್ಕೇರಿದೆ.
ಎರಡು ರಾಜ್ಯದ ಸಿಎಂಗಳು ನಿಮ್ಮ ಬೆನ್ನಿಗಿದ್ದಾರೋ ಅಥವಾ ಕಾಲು ಕೆಳಗಿದ್ದಾರೋ ಗೊತ್ತಿಲ್ಲ. ಸಮಯ ಹೀಗೆ ಇರುವುದಿಲ್ಲ ರೋಹಿಣಿ ಸಿಂಧೂರಿ ಅವರೇ? ಕಾನೂನಿನ ಪ್ರಕ್ರಿಯೆಯಲ್ಲಿ ನೀವು ಒಂದು ದಿನ ಸಿಲುಕಿಕೊಳ್ಳುತ್ತೀರಾ? ಆಗ ನಿಮಗೆ ಕಾನೂನು ಅರಿವಾಗುತ್ತದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನು ಪ್ರಶ್ನಿಸಲು ನಿಮಗೂ ಮೇಲಿನ ಅಧಿಕಾರಿಗಳಿದ್ದಾರೆ. ಅವರಿಗೂ ನೀವು ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ...ಹುಣಸೂರು ಶಾಸಕರ ಆರೋಪಕ್ಕೆ ಪತ್ರದ ಮೂಲಕ ಉತ್ತರ ಕೊಟ್ಟ ಡಿಸಿ ರೋಹಿಣಿ ಸಿಂಧೂರಿ
ಜಿಲ್ಲಾಧಿಕಾರಿ ವಿರುದ್ಧ ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಅವರ ಆರೋಪಕ್ಕೆ ರೋಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿದ್ದರು. ಗಜಪಯಣದಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗಿಲ್ಲ, ದಸರಾ ಉನ್ನತ ಸಮಿತಿ ಸಭೆ ತೀರ್ಮಾನದಂತೆ ನಡೆದುಕೊಳ್ಳಲಾಗಿದೆ.
ಹುಣಸೂರಿಗೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ್ದಾಗ ತಾವು ಅನಾರೋಗ್ಯದಿಂದ ಇದ್ದ ಕಾರಣ ನಿಮ್ಮ ಜೊತೆ ಚರ್ಚೆ ಸಾಧ್ಯವಾಗಿಲ್ಲ. ಕೆಡಿಪಿ ಸಭೆಯಲ್ಲಿ ನೀವು ನೀಡಿರುವ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ. ಹೇಳಿಕೆ ನೀಡುವ ಮುನ್ನ ವಾಸ್ತವಾಂಶ ಗಮನಿಸಿ ಹೇಳಿಕೆ ನೀಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಮಂಜುನಾಥ್ ಅವರಿಗೆ ಉತ್ತರ ನೀಡಿದ್ದರು.