ಮೈಸೂರು: ಕಾಂಗ್ರೆಸ್ನವರು ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀನಿ.. ಹಾವು ಬಿಡ್ತೀನಿ ಅಂತಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದರು.
ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನ ಬನ್ನಿಮಂಟಪದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀನಿ ಅಂತಾರೆ. ಹಾವಿನ ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು, ಬುಸ್ ಅನ್ನುತ್ತಾ ಅಥವಾ ಟುಸ್ ಅನ್ನುತ್ತಾ ಎಂದು. ಇತ್ತೀಚೆಗೆ ಇದು ಎಲ್ಲರಿಗೂ ಚಟ ಆಗಿದೆ ಎಂದು ಕುಟುಕಿದರು.
ರಮೇಶ್ ಜಾರಕಿಹೊಳಿಗೂ ಟಾಂಗ್: ಶಾಸಕ ರಮೇಶ್ ಜಾರಕಿಹೊಳಿ ಸಹ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ದಾರೆ. ಇದು ಎಲ್ಲರಿಗೂ ಒಂದು ತರಹದ ಹ್ಯಾಬಿಟ್ ಆಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಮ್ಮದೇ ಪಕ್ಷದ ಶಾಸಕ ರಮೇಶ್ ಜಾರಕಿಹೊಳಿಗೂ ಸೋಮಶೇಖರ್ ಟಾಂಗ್ ಕೊಟ್ಟರು.
ಕಾಂಗ್ರೆಸ್ನವರಿಗೆ ಕೆಲಸವಿಲ್ಲ: ಕಾಂಗ್ರೆಸ್ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಬೆಳಗ್ಗೆ ಎದ್ದರೆ ಕೆಸರೆರಚಾಡೋದು ಅವರ ಕೆಲಸ ಆಗಿದೆ. ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೇ ಅವರು ಏನೇನೋ ಮಾತನಾಡುತ್ತಾರೆ.
ಆದರೆ, ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿಎಂ ಬೊಮ್ಮಾಯಿ ಆಡಳಿತವನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ ಎಂದು ಇದೇ ವೇಳೆ ಮಾರ್ಕ್ಸ್ ಸಹ ಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗುವುದಿಲ್ಲ. ಅಸಮಾಧಾನಗೊಂಡಿರುವ ಸಚಿವರು ಸಮಾಧಾನವಾಗುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ನಾವು ಮರಳಿ ಕಾಂಗ್ರೆಸ್‌ಗೆ ಹೋದ್ರೇ ಸಿದ್ದರಾಮಯ್ಯ ಆ ಪಕ್ಷದಲ್ಲಿ ಇರುವುದಿಲ್ಲ.. ಸಚಿವ ಮುನಿರತ್ನ
ಇನ್ನೂ ಮೈಸೂರಿನ ಕೋವಿಡ್ ಪ್ರಕರಣಗಳು ಉಲ್ಭಣಗೊಳ್ಳುತ್ತಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಭರವಸೆ ನೀಡಿದರು.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ