ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ಸುಲಭವಾಗಿ ತಲುಪಬೇಕು. ಇದರ ಬಗ್ಗೆ ಖುದ್ದಾಗಿ ನಾನೇ ಮಾಹಿತಿಯನ್ನು ತರಿಸಿಕೊಂಡು ಪರಿಶೀಲನೆ ಮಾಡುವೆ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯದ ಸ್ಪಂದನೆ ಎಂಬ ಹೆಸರಿನಡಿ ನಡೆದ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಜಿಲ್ಲೆಯಲ್ಲಿ ಸುಮಾರು 30 ರಿಂದ 40 ಸಾವಿರ ವಿಲೇವಾರಿಯಾಗದ ಕಡತಗಳಿವೆ. ತಂತ್ರಜ್ಞಾನಗಳು ಬಹಳಷ್ಟು ಆಧುನೀಕರಣಗೊಂಡಿರುವ ಇಂತಹ ಸಮಯದಲ್ಲಿಯೂ ಹಲವಾರು ವರ್ಷಗಳಿಂದ ಕಡತ ವಿಲೇವಾರಿಯಾಗಿಲ್ಲ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಶ್ರೀರಾಘವೇಂದ್ರ ಸ್ವಾಮಿಗಳ ಗುರು ವೈಭೋತ್ಸವ
ಕಡತ ವಿಲೇವಾರಿಯನ್ನು 2 ವಾರದೊಳಗೆ ಮಾಡಿ ಮುಗಿಸಲೇಬೇಕು. ಕಡತಗಳು ವಿಲೇವಾರಿಯಾಗುವವರೆಗೂ ಯಾರೂ ರಜೆಯನ್ನು ತೆಗೆದುಕೊಳ್ಳುವಂತಿಲ್ಲ ಎಂದರು. ಜನರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ 79 ಎ ಆ್ಯಂಡ್ ಬಿ ಬದಲಾವಣೆ ಮಾಡಿದೆವು, ಮನೆಬಾಗಿಲಿಗೆ ಪೆನ್ಷನ್ ಕೊಡಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ರೂಪಿಸಿ ಪ್ರತಿ ಹಳ್ಳಿಯ ಪ್ರತಿ ಮನೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.