ಮೈಸೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ವಿರೋಧ ಪಕ್ಷದ ಸ್ಥಾನಕ್ಕೂ ಬರುವುದಿಲ್ಲ. ಇನ್ನೂ ಮುಖ್ಯಮಂತ್ರಿ ಪದವಿ ಅವರಿಗೆ ಬರೀ ಕನಸು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಿಂದುಳಿದ, ದಲಿತ ವರ್ಗಗಳಿಗೆ ಹೆಚ್ಚಿನ ಸ್ಥಾನ ಕೊಡಲಾಗಿದೆ. ಅಂಬೇಡ್ಕರ್ ತತ್ವದ ರೀತಿಯಲ್ಲೇ ಸಾಮಾಜಿಕ ನ್ಯಾಯವನ್ನು ನೀಡಲಾಗಿದೆ. ಈ ವಿಚಾರಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಚುನಾವಣೆಗೆ ಇನ್ನೂ 2 ವರ್ಷವಿದೆ. ಕಾಂಗ್ರೆಸ್ ಪಕ್ಷದಲ್ಲಿ 5 ಜಾತಿಗೆ, 5 ಜನ ಸ್ವಯಂ ಘೋಷಿತ ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ನಾನು ಕಾಂಗ್ರೆಸ್ನವರಿಗೆ ಹೇಳುವುದೇನೆಂದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ವಿರೋಧ ಪಕ್ಷದ ಸ್ಥಾನಕ್ಕೂ ಬರುವುದಿಲ್ಲ. ಇನ್ನೂ ಮುಖ್ಯಮಂತ್ರಿ ಪದವಿ ಕನಸು ಎಂದರು.
ಕಾಂಗ್ರೆಸ್ಗೆ ಬಿಜೆಪಿಗೆ ಬಂದ 17 ಜನರನ್ನು ವಾಪಸ್ ಕರೆಸುಕೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬೇರೆ ಬೇರೆ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲೇ ಮುಳುಗುವ ಹಡಗಾಗಿದ್ದು, ಆ ಪಕ್ಷಕ್ಕೆ ಯಾರು ಹೋಗುವುದಿಲ್ಲ. ಇನ್ನೂ, ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಲು ಪ್ರಯತ್ನ ಮಾಡಿಲ್ಲ ಎಂದು ಆಣೆ ಮಾಡಿಲ್ಲ ಎಂದ ಈಶ್ವರಪ್ಪ, ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ನಿರ್ಣಾಮ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದಲ್ಲಿ ಸಿಎಂ ವಿರುದ್ದವೇ ಮಾತನಾಡುತ್ತಿರುವ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿ, ಯೋಗೇಶ್ವರ್ ಸೇರಿದಂತೆ 3 ಜನರಿಗೆ ಯಾವಾಗ ಬುದ್ಧಿ ಕಲಿಸಬೇಕು ಎಂಬುದು ಗೊತ್ತಿದೆ. ತಾಳ್ಮೆಯಿಂದ ಕಾಯಿರಿ ಎಂದರು.