ಮೈಸೂರು: ಲಾಕ್ಡೌನ್ ಸಡಿಲಿಕೆಯಾದರೂ ಪ್ರವಾಸಿಗರಿಲ್ಲದೇ ಟಾಂಗಾ ನಂಬಿಕೊಂಡವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.
ಪ್ರವಾಸಿಗರ ನಗರಿಯಲ್ಲಿ ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರಲ್ಲಿ ಟಾಂಗಾವಾಲಾಗಳು ಒಬ್ಬರು. ಲಾಕ್ಡೌನ್ ಸಡಿಲಿಕೆಯಾದರೂ ಇಲ್ಲಿನ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ವಿಶ್ವವಿಖ್ಯಾತ ಚರ್ಚ್ ತೆರೆಯಲು ಅವಕಾಶ ನೀಡಿಲ್ಲ. ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ, ಅವರನ್ನೆ ಅವಲಂಬಿಸಿದ್ದ ಟಾಂಗಾವಾಲಾಗಳಿಗೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ತಮ್ಮ ಕಷ್ಟ ವಿವರಿಸುತ್ತಾರೆ ಇಲ್ಲಿನ ಸುಣ್ಣದಕೇರಿಯ ಟಾಂಗಾ ಗಾಡಿ ಮಾಲೀಕ ನಾಸಿರ್.
ಪ್ರವಾಸಿಗರನ್ನು ನಂಬಿಕೊಂಡು ಜೀವನ ಮಾಡುವವರು ನಾವು. ಹೆಚ್ಚು ಕಡಿಮೆ 20 ವರ್ಷದಿಂದ ಟಾಂಗಾ ಗಾಡಿ ಓಡಿಸುತ್ತಿದ್ದೇನೆ. ಅರಮನೆ ತೆರೆದರೆ ಮಾತ್ರ ನಮ್ಮ ಹಾಗೂ ಕುದುರೆ ಹೊಟ್ಟೆಪಾಡು ನಡೆಯುತ್ತದೆ. ಇಲ್ಲ ಅಂದರೆ ಇಲ್ಲ. ಲಾಕ್ಡೌನ್ ಆರಂಭವಾದಾಗಿನಿಂದ ಈವರೆಗೂ ಕುದುರೆಗಳು ಉಪವಾಸ ನಿಂತಿವೆ ಎಂದು ಅವರು ಅಳಲು ತೋಡಿಕೊಂಡರು.
ಸರ್ಕಾರದಿಂದ ನಮಗೇನೂ ಸಿಕ್ಕಿಲ್ಲ. ಒಂದು ದಿನಕ್ಕೆ ಕುದುರೆಗೆ 200 ರೂಪಾಯಿ ಖರ್ಚಾಗುತ್ತದೆ. ಕುದುರೆ ಖರ್ಚು, ನಮ್ಮ ಖರ್ಚು ನೋಡಿಕೊಳ್ಳಬೇಕು. ಈಗ ಅದು ಸಾಧ್ಯವಾಗುತ್ತಿಲ್ಲ. ತುಂಬಾ ಕಷ್ಟದಲ್ಲಿದ್ದೇವೆ. ಸರ್ಕಾರ ಏನಾದರೂ ಪರಿಹಾರ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಳ್ಳುತ್ತಾರೆ ನಾಸಿರ್.