ಮೈಸೂರು: ಶಾಸಕ ಸಾ. ರಾ. ಮಹೇಶ್ ಅವರು ಬೆದರಿಕೆ ಹಾಕಿ ನನ್ನ ಭೂಮಿಯನ್ನು ತಮ್ಮ ಸ್ನೇಹಿತನಿಗೆ ಕೊಡಿಸಿದ್ದಾರೆ. ದಯವಿಟ್ಟು ನಮ್ಮ ಜಮೀನನ್ನು ನನಗೆ ಬಿಡಿಸಿಕೊಡಿ ಎಂದು ಭೂ ಮಾಲೀಕರೊಬ್ಬರು ಮನವಿ ಮಾಡಿದ್ದಾರೆ.
ಭೂ ಮಾಲೀಕನಿಗೆ ಶಾಸಕ ಮಹೇಶ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಂತ್ರಸ್ತ ಗಣಪತಿ ರೆಡ್ಡಿ, ತಾಲ್ಲೂಕಿನ ಕೆರ್ಗಳ್ಳಿ ಸರ್ವೆ ನಂಬರ್ 115ರಲ್ಲಿ 2014ರಲ್ಲಿ 2 ಎಕರೆ ಜಮೀನನ್ನ ಖರೀದಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನನ್ನ ಹೆಸರಿನಲ್ಲಿವೆ. ಆದ್ರೆ ಶಾಸಕ ಸಾ.ರಾ. ಮಹೇಶ್ ಅವರು ತಮ್ಮ ಸ್ನೇಹಿತ ಮಂಜುನಾಥ್ ಎಂಬುವರಿಗೆ ಆ ಜಾಗವನ್ನು ಕೊಡಿಸಿದ್ದಾರೆ. ಅಲ್ಲದೆ ತಮ್ಮ ಹುಡುಗರನ್ನು ಬಿಟ್ಟು ತಂತಿ ಬೇಲಿ ಹಾಕಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ಸಾ.ರಾ. ಮಹೇಶ್ ಅವರಿಗೆ ಕರೆ ಮಾಡಿ ಕೇಳಿದ್ರೆ, ಅದು ನನ್ನ ಸ್ನೇಹಿತನಿಗೆ ಸೇರಿದ ಜಾಗ, ನಿನ್ನ ಹತ್ತಿರ ದಾಖಲಾತಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ತಮ್ಮ ಸ್ನೇಹಿತನ ಮಾತು ಕೇಳಿ ನನ್ನ ಜಮೀನನ್ನು ಅವರಿಗೆ ಕೊಡಿಸಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಭೂ ಮಾಲೀಕ ಗಣಪತಿ ರೆಡ್ಡಿ ಮನವಿ ಮಾಡಿದರು.
ಜೊತೆಗೆ ಈ ಬಗ್ಗೆ ಕಳೆದ 5 ತಿಂಗಳ ಹಿಂದೆಯೇ ಜೈಪುರ ಠಾಣೆಯಲ್ಲಿ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗಣಪತಿ ರೆಡ್ಡಿ ಅಳಲು ತೋಡಿಕೊಂಡರು.