ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 3 ಸರಣಿ ಹತ್ಯೆಗಳಾಗಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಮೈಸೂರು ನಗರದ ಪೊಲೀಸರು ಗಡಿಭಾಗದಲ್ಲಿ ತಪಾಸಣೆ ಚುರುಕುಗೊಳಿಸುವ ಮೂಲಕ ನಗರದಲ್ಲೂ ಹೈ-ಅಲರ್ಟ್ ಆಗಿದ್ದಾರೆ. ಮಂಗಳೂರು, ಕೊಡಗು ಹಾಗೂ ಕೇರಳದಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿದ್ದು, ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5.30ರವರೆಗೆ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಈ ವಿಶೇಷ ಅಭಿಯಾನ 10 ದಿನಗಳ ಕಾಲ ನಡೆಯಲಿದ್ದು, ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಚೆಕ್ಪೋಸ್ಟ್ ನಿರ್ಮಾಣ ಮಾಡಿ ನಗರ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿರುವ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ, ಮಂಗಳೂರು ಘಟನೆಯ ನಂತರ ಈಗ ಮೈಸೂರು ನಗರಕ್ಕೆ ಬರುವ ಪ್ರತಿಯೊಂದು ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಲ್ಲಿಗೆ ಬರುವ ಜನರು ಯಾವ ಉದ್ದೇಶಕ್ಕಾಗಿ ಬರುತ್ತಿದ್ದಾರೆ, ಎಲ್ಲಿ ಮತ್ತು ಎಷ್ಟು ದಿನ ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ನಗರದ ಎಲ್ಲ ಭಾಗಗಳಲ್ಲಿ ಪರಿಶೀಲನೆ ನಡೆಸಿ ಪ್ರತಿಯೊಂದು ವಾಹನದ ನೋಂದಣಿ ಸಂಖ್ಯೆ ಹಾಗೂ ಪ್ರಯಾಣಿಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಇದರ ಜೊತೆಗೆ ನಗರದಲ್ಲಿ ಗುಪ್ತಚರ ಇಲಾಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಪಕ್ಷದ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು: ಸಿಎಂ ನಿವಾಸ, ಬಿಜೆಪಿ ಕಚೇರಿಗೆ ಹೆಚ್ಚುವರಿ ಭದ್ರತೆ