ಮೈಸೂರು : ಮಾಜಿ ಸಿಎಂ ಬಿ ಎಸ್ ಯಡಿಯೂಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ. ಈವರೆಗೆ ಬಿಎಸ್‌ವೈ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈತ್ರಿ ವಿಚಾರವಾಗಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬೊಮ್ಮಾಯಿ ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಆದರೆ, ಕಾಂಗ್ರೆಸ್ ಬಹಿರಂಗವಾಗಿಯೇ ನಮಗೆ ಯಾರ ಬೆಂಬಲವೂ ಬೇಡ ಎಂದಿದ್ದಾರೆ.
ಬೇಡ ಎಂದವರಿಗೆ ನಾವೇ ಹೋಗಿ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆ ಮೈತ್ರಿ ಸುಳಿವು ನೀಡಿದರು. ಈ ಎಲ್ಲ ಅಂಶ ಮುಂದಿಟ್ಟುಕೊಂಡು ನಾಳೆ ಬೆಂಬಲದ ತೀರ್ಮಾನ ಮಾಡುವೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಹೇಳುತ್ತೇನೆ ಎಂದರು.
ಗೆಲ್ಲುವ ವಿಶ್ವಾಸ : ನಮಗೆ ಆರು ಕ್ಷೇತ್ರಗಳು ಪ್ರತಿಷ್ಠೆಯಾಗಿ ಪರಿಣಮಿಸಿವೆ. 6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸನ್ನಿವೇಶ ಇದೆ. ಮೈಸೂರಿನಲ್ಲಿ ಮೊದಲ ಬಾರಿ ಕಾರ್ಯಾಗಾರದ ಅಂಶಗಳನ್ನು ಅಳವಡಿಕೆ ಮಾಡಲಾಗಿದೆ. ಈ ಹಿಂದೆ ಇಲ್ಲಿ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ.
ಈ ಬಾರಿ ಕೂಡ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಇನ್ನg ವರುಣಾ ಕ್ಷೇತ್ರದಲ್ಲೂ ನಾಯಕರ ಕೊರತೆ ನಡುವೆಯೂ ಸಭೆ ಯಶಸ್ವಿಯಾಗಿದೆ. ಇದೆಲ್ಲವನ್ನು ಗಮನಿಸಿದರೆ ಜೆಡಿಎಸ್ ಮುಂದಿನ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಕಾಣಲಿದೆ ಎಂದು ತಿಳಿಸಿದರು.
ಕಾರ್ಯಕರ್ತರೇ ಹೊಸ ನಾಯಕನನ್ನು ಗುರುತಿಸುತ್ತಾರೆ : ಚಾಮುಂಡೇಶ್ವರಿ 'ಕೈ' ಟಿಕೆಟ್ ಜಿಟಿಡಿಗೆ ಕೊಡಬೇಕಾಗುತ್ತೆ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವ ಶಾಸಕರು ಏನೇ ಹೇಳಲಿ, ಯಾರು ಯಾವ ಪಕ್ಷಕ್ಕಾದರೂ ಹೋಗಲಿ. ಈಗಾಗಲೇ ನಾನು ಹೇಳಿರುವಂತೆ ಹೊಸ ನಾಯಕತ್ವಕ್ಕೆ ನಾನು ಬದ್ಧ. ಕಾರ್ಯಕರ್ತರೇ ಹೊಸ ನಾಯಕತ್ವವನ್ನ ಹುಟ್ಟು ಹಾಕಲಿದ್ದಾರೆ ಎಂದು ಜಿ ಟಿ ದೇವೇಗೌಡರಿಗೆ ಟಾಂಗ್ ಕೊಟ್ಟರು.
ಕಾಂಗ್ರೆಸ್, ಬಿಜೆಪಿಯಲ್ಲೂ ನಮ್ಮ ಪರ ಇದ್ದಾರೆ : ನಮ್ಮ ಕಾರ್ಯಕರ್ತರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ನಾಯಕರನ್ನು ಹಾಕುವಂತೆ ಕೇಳಿದ್ದಾರೆ. ನಾನು ಅದೇ ಕೆಲಸದಲ್ಲಿ ಇದ್ದೇನೆ. ಹಿಂದೆ ಇದ್ದವರಿಗೂ ರಾಜಕೀಯ ಉಳಿವು ಮುಖ್ಯ ಅಲ್ಲವೇ? ಅದಕ್ಕೆ ಅವರು ಅವರ ತಂಡವನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಅವರಂತೆ ಮೂರೂ ಪಕ್ಷಗಳಲ್ಲೂ ನಮ್ಮ ಪರ ಕೆಲಸ ಮಾಡುವವರು ಇದ್ದಾರೆ.
ಕಾಂಗ್ರೆಸ್, ಬಿಜೆಪಿಯಲ್ಲೂ ನಮ್ಮ ಪರ ಇರುವವರು ಇದ್ದಾರೆ ಎಂದರು. ನಾಯಕರು ಏನೇ ಹೇಳಿದರೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಎರಡನೇ ಪ್ರಾಶಸ್ತ್ಯದ ಮತ ಜೆಡಿಎಸ್‌ಗೆ ಕೊಡುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ''2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಎಂಎಲ್ಸಿ ಸಮರದಲ್ಲಿ ಪಕ್ಷವೊಂದಕ್ಕೆ ಬೆಂಬಲ ನೀಡುತ್ತೇವೆ''