ಮೈಸೂರು: ಕಬಿನಿ ಜಲಾಶಯದಿಂದ 1 ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಪರಿಣಾಮ ನಂಜನಗೂಡಿನ ಬಳಿಯ ಕಪಿಲ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿರುವುದಕ್ಕೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಕಬಿನಿ ಹಾಗೂ ತಾರಕ ಜಲಾಶಯಗಳಿಂದ ಅಧಿಕ ನೀರು ಒಳ ಬರುತ್ತಿರುವ ಹಿನ್ನಲೆ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ಇರುವ ಸ್ನಾನಘಟ್ಟ ಹಾಗೂ ಹದಿನಾರು ಕಾಲುಮಂಟಪ ಸಂಪೂರ್ಣ ಮುಳುಗಿದೆ. ಪ್ರವಾಹದಿಂದ ಎಚ್ಚೆತ್ತ ಜಿಲ್ಲಾಡಳಿತ ಖುದ್ದಾಗಿ ಸ್ಥಳೀಯ ಬಿಜೆಪಿ ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇನ್ನೊಂದೆಡೆ ನಂಜನಗೂಡು ನಗರದ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಮಳ್ಳಾದ ಕೇರಿ, ಸರಸ್ವತಿ ಕಾಲೋನಿ ಸೇರಿದಂತೆ ನಂಜನಗೂಡು ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಬದಲಿ ಮಾರ್ಗಕ್ಕೆ ಸೂಚನೆ:
ಪ್ರವಾಹದ ಭೀತಿಯಿಂದ ಮೈಸೂರು- ಕೇರಳ ರಾಷ್ಟ್ರೀಯ ಹೆದ್ದಾರಿ ಮುಳುಗುವ ಸೂಚನೆ ಹಿನ್ನಲೆ ಜಿಲ್ಲಾಧಿಕಾರಿಗಳು ಪ್ರಯಾಣಿಕರಿಗೆ ಬೇರೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದು, ಕಬಿನಿ ನದಿಯಿಂದ ರಾತ್ರಿ ಹೆಚ್ಚಿನ ನೀರು ಬಿಡುಗಡೆ ಮಾಡುವ ಹಿನ್ನಲೆ ನಾಳೆಯಿಂದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದಾರೆ.