ಮೈಸೂರು: ಪಾಲುದಾರಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು, ಶರತ್ ಮಾರ್ಚ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಶರತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಹಾಗೂ ಮತ್ತೊಬ್ಬ ಪಾಲುದಾರ ಪ್ರವೀಣ್ ವಿರುದ್ಧ ಎಫ್ಐಆರ್ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ, ಪ್ರವೀಣ್ ಹಾಗೂ ಆತ್ಮಹತ್ಯೆಗೆ ಶರಣಾದ ಶರತ್ ಮೂವರು ಸ್ವದೇಶಿ ಗ್ರೂಪ್ ಎಂಬ ಕಂಪನಿಯನ್ನು ಪಾರ್ಟ್ನರ್ ಶಿಪ್ನಲ್ಲಿ ನಡೆಸುತ್ತಿದ್ದರು. ಈ ವ್ಯವಹಾರದಲ್ಲಿ ಶರತ್ಗೆ ಇಬ್ಬರೂ ಮೋಸ ಮಾಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಬೇಸರಗೊಂಡ ಶರತ್ ತನ್ನ ಪಾಲನ್ನು ವಾಪಸ್ ನೀಡುವಂತೆ ಕೇಳಿದ್ದರು. ಹೂಡಿಕೆ ಪುನಃ ಕೇಳಿದ್ದಕ್ಕೆ ಅಪ್ಪಣ್ಣ ಹಾಗೂ ಪ್ರವೀಣ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಶರತ್ ನನ್ನ ಸಾವಿಗೆ ಈ ಇಬ್ಬರು ಕಾರಣ, ಇವರಿಂದ ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ ಬರೆದಿಟ್ಟು ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿದ ನಂತರ ಮಾರ್ಚ್ 18ರಂದು ನೇಣಿಗೆ ಶರಣಾಗಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ನರಸಿಂಹರಾಜ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು. ಪ್ರಭಾವಿ ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ವಿರುದ್ಧ ಎಫ್ಐಆರ್ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದರು. ಕೊನೆಗೆ ಹಾಸನದಿಂದ ಕೆಲವು ಸಂಘಟನೆಯ ಮುಖಂಡರು ನರಸಿಂಹರಾಜ ಠಾಣೆಗೆ ಬಂದು ಬಂದು ಒತ್ತಡ ಹೇರಿದಾಗ ಕೊನೆಗೂ ಅಪ್ಪಣ್ಣ ಹಾಗೂ ಪ್ರವೀಣ್ ವಿರುದ್ಧ ದೂರು ದಾಖಲಾಗಿದೆ.
ಅಪ್ಪಣ್ಣ ಹಾಗೂ ಪ್ರವೀಣ್ ಅವರ ಬೆದರಿಕೆ ಹಾಗೂ ಕಿರುಕುಳದಿಂದ ಶರತ್ ಆತ್ಮಹತ್ಯೆಗೆ ಶರಣಾಗಿದ್ದು, ಇವರಿಬ್ಬರ ವಿರುದ್ಧ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಮಗೆ ಬರಬೇಕಾದ ಹಣವನ್ನು ವಾಪಸ್ ಕೊಡಿಸಬೇಕೆಂದು ಮೃತ ಶರತ್ ಸೋದರಿ ಶುಭ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮದ್ದೂರು ಧಾಬಾದಲ್ಲಿ ಗಲಾಟೆ ಬಿಡಿಸಲು ಬಂದ ಯುವಕನೇ ಕೊಲೆಯಾದ