ಮೈಸೂರು: ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ರೈತರ ಬೃಹತ್ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಲು ಮೈಸೂರು ಭಾಗದಿಂದ ತೆರಳುತ್ತಿರುವ ರೈತರನ್ನು ಅದ್ಧೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.
ಚಾಮರಾಜನಗರದ ಅಮೃತ್ ಭೂಮಿಯಿಂದ ಮೈಸೂರಿನ ಗನ್ ಹೌಸ್ ಬಳಿ ಕ್ಯಾಂಟರ್ನಲ್ಲಿ ಆಗಮಿಸಿದ್ದ ರೈತರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ, ಹಸಿರು ಸೇನೆ, ರೈತ ಸಂಘಟನೆಗಳ ಮುಖಂಡರು ಹಾಗೂ ಕೃಷಿಕರು ಸ್ವಾಗತ ಕೋರಿ, ಊಟೋಪಚಾರ ವ್ಯವಸ್ಥೆ ಮಾಡಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಕೂಡಲೇ ಇಂತಹ ಕಾಯ್ದೆಗಳನ್ನು ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡಬಾರದು. ದೆಹಲಿಯಲ್ಲಿ ಒಂದೂವರೆ ತಿಂಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.