ಮೈಸೂರು: ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಹಾಗೂ ಸಾಂಸ್ಕೃತಿಕ ನಗರಿಗೆ ಹೆಲಿಟೂರಿಸಂ ಗೆ ಚಾಲನೆ ನೀಡಲಾಗುವುದು ಎಂಬ ಹೇಳಿಕೆಗೆ ಪಾರಂಪರಿಕ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ತಲಕಾಡಿನ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮೈಸೂರಿನಲ್ಲಿ ಶೀಘ್ರವೇ ಹೆಲಿಟೂರಿಸಂ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ಸದ್ಯ ಸಚಿವರ ಈ ಹೇಳಿಕೆಗೆ ಪಾರಂಪರಿಕ ಕಮಿಟಿಯ ಸದಸ್ಯ ಪ್ರೋ. ರಂಗರಾಜು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅವಶ್ಯಕತೆ ಇಲ್ಲ. ಏಕೆಂದರೆ 5 ಕಡೆಯಿಂದ ಬೆಟ್ಟಕ್ಕೆ ಹೋಗಲು ಸುಗಮ ರಸ್ತೆಗಳಿವೆ. ಮೆಟ್ಟಿಲುಗಳ ಮೂಲಕ ಸಹ ಬೆಟ್ಟಕ್ಕೆ ಹೋಗಬಹುದಾಗಿದ್ದು, ರೋಪ್ ವೇ ನಿರ್ಮಾಣ ನೂರಾರು ಮರಗಳ ನಾಶಕ್ಕೆ ಕಾರಣವಾಗುತ್ತದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನ ಲಲಿತ್ ಮಹಲ್ ಹೆಲಿಬ್ಯಾಡ್ ಬಳಿ ನೂರಾರು ಮರಗಳನ್ನು ಕಡಿದು ಹೆಲಿಟೂರಿಸಂ ಮಾಡುವುದು ಬೇಡ. ಬೇಕಿದ್ದರೆ ಚಿತ್ರ ನಗರಿ ನಿರ್ಮಾಣವಾಗುತ್ತಿರುವ ಹಿಮ್ಮಾವು ಬಳಿ ಹೆಲಿಟೂರಿಸಂ ಆರಂಭಿಸಿದರೆ ಒಳ್ಳೆಯದಾಗುತ್ತದೆ ಎಂದು ಪ್ರೋ.ರಂಗರಾಜು ಸಲಹೆ ನೀಡಿದರು.