ಮೈಸೂರು: ನಿನ್ನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಬಡ ಮಹಿಳೆ ಸುಶೀಲಮ್ಮ ಅವರು ಗ್ರಾಮಶಕ್ತಿ ಫೈನಾನ್ಸ್ ಕಂಪನಿಗೆ ಎರಡು ತಿಂಗಳ ಕಂತು ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯವರು ಮನೆಯ ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು.
ಇದರಿಂದ ಈ ಕುಟುಂಬ ತೊಂದರೆಗೆ ಸಿಲುಕಿತ್ತು. ಈ ಬಗ್ಗೆ ನಿನ್ನೆ ಈಟಿವಿ ಭಾರತ್ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆ ಇಂದು ಬೆಳಗ್ಗೆಯೇ ಮನೆಗೆ ಬಂದ ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್, ತಗಡೂರು ಗ್ರಾಮಕ್ಕೆ ಭೇಟಿ ನೀಡಿ ನೊಂದ ಮಹಿಳೆಯ ಮನೆಯ ಹತ್ತಿರ ಹೋಗಿ ಮನೆಯ ಬೀಗವನ್ನು ಸ್ವತಃ ಅವರೇ ತೆಗೆಸಿದರು. ಬಳಿಕ ನೊಂದ ಮಹಿಳೆಗೆ ಸಾಂತ್ವನ ಹೇಳಿ, ನಿಮ್ಮ ಜೊತೆ ನಾವಿದ್ದೇವೆ ಹೆದರಬೇಡಿ ಧೈರ್ಯವಾಗಿರಿ ಎಂದರು.
ಜೊತೆಗೆ ಮನೆಗೆ ಬೀಗ ಹಾಕಿದ ಮೈಕ್ರೋ ಫೈನಾನ್ಸ್ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು.