ಮೈಸೂರು: ಶೂಟೌಟ್ ಹಾಗೂ ಗ್ಯಾಂಗ್ ರೇಪ್ ಪ್ರಕರಣದಿಂದ ಬೆಚ್ಚಿ ಬಿದ್ದಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ಇಂದು ನಗರದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಸ್ಫೋಟಕ ಇಟ್ಟಿದ್ದೇವೆ ಎಂಬ ಹುಸಿ ಬಾಂಬ್ ಸುದ್ದಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ.
ಬಿಡಾರಂ ಕೃಷ್ಣಪ್ಪ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸರಿಗೆ ಪತ್ರ ತಲುಪಿದೆ. ಕೂಡಲೇ ಎಚ್ಚೆತ್ತ ಪೊಲೀಸರು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಗೆ ತೆರಳಿ ಎಲ್ಲ ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿ ತಪಾಸಣೆ ಮಾಡಿದ್ದಾರೆ.
ಸುಮಾರು 2 ಗಂಟೆಗೂ ಹೆಚ್ಚು ಕಾಲ ತಪಾಸಣೆ ಮಾಡಿದ ಪೊಲೀಸರು, ಕಚೇರಿಯ ಪ್ರತಿಯೊಂದು ಕೊಠಡಿಯನ್ನ ಶೋಧಿಸಿದ್ದಾರೆ. ಅಲ್ಲದೇ ಸಿಬ್ಬಂದಿಯ ಊಟದ ಬ್ಯಾಗ್ ಸಹ ಪರಿಶೀಲಿಸಿದರು. ಕಾರ್ಯಾಚರಣೆಗೆ ಅಡ್ಡಿಯಾಗಬಾರದೆಂದು ರಸ್ತೆಯ ಎರಡು ಭಾಗಗಳನ್ನು ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಶ್ವಾನದಳ, ಬೆರಳಚ್ಚು ಸಿಬ್ಬಂದಿ ಹಾಗೂ ಪೊಲೀಸರು ತಪಾಸಣೆ ಮಾಡಿ, ಎಲ್ಲಿಯೂ ಸ್ಫೋಟಕ ವಸ್ತುಗಳು ಸಿಗದೆ ಇದ್ದಾಗ ಇದೊಂದು ಹುಸಿ ಕರೆ ಎಂದು ಪರಿಗಣಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಪ್ರದೀಪ್ ಗುಂಟಿ, ಮೊದಲ ಹಂತದಲ್ಲಿ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಯಾವ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಸಂದೇಶ ಎನಿಸುತ್ತಿದೆ. ಆದರೂ 2ನೇ ಹಂತದಲ್ಲಿ ಮತ್ತೊಮ್ಮೆ ತಪಾಸಣೆ ನಡೆಸುತ್ತಿದ್ದೇವೆ. ಪತ್ರ ಬಂದಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿಗೆ ಬಾಂಬ್ ಬೆದರಿಕೆ.. ಪೊಲೀಸರಿಗೆ ಬಂತು ಕರೆ