ಮೈಸೂರು : ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡಿದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪ್ರಿಯಕರನಿಗೆ ಬರೆದ ಪತ್ರ ಹಾಗೂ ಆತನ ಮೊಬೈಲ್ ವಶಪಡಿಸಿಕೊಂಡು ಆತನನ್ನು ವಿಚಾರಣೆ ನಡೆಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ ಎಂಬ ಅಪ್ರಾಪ್ತೆ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವತಿಯ ತಂದೆ ಮಗಳನ್ನೇ ಕೊಲೆ ಮಾಡಿದ್ದ ಎಂಬ ಪ್ರಕರಣ, ಕಳೆದ ಮೂರು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಕೊಲೆಯಾದ ಪುತ್ರಿಯ ತಂದೆ ಸುರೇಶನನ್ನು ಪೊಲೀಸರು ತನಿಖೆಗೊಳಪಡಿಸಿದ್ದು, ಸ್ಥಳ ಮಹಜರು ಹಾಗೂ ಇತರ ಆಯಾಮಗಳಿಂದಲೂ ತನಿಖೆ ತೀವ್ರಗೊಳಿಸಿದ್ದಾರೆ.
ಈ ಮಧ್ಯೆ ಸಾವಿಗೂ ಮುನ್ನ ಬಾಲಕಿ ತನಗೆ ಜೀವ ಭಯ ಇದೆ ಎಂಬ ವಿಷಯಗಳನ್ನೊಳಗೊಂಡ ಮೂರು ಪುಟದ ಪತ್ರವನ್ನು ಬರೆದು ಪ್ರಿಯಕರನಿಗೆ ನೀಡಿದ್ದಳು. ಇದರ ಜೊತೆಗೆ ಆತನೊಂದಿಗೆ ಮಾತನಾಡಿದ ಮೊಬೈಲ್ ವಾಯ್ಸ್ ರೆಕಾರ್ಡ್ ಸಹ ಪ್ರಿಯಕರನ ಬಳಿ ಇದೆ.
ಪ್ರಿಯಕರನ ವಿಚಾರಣೆ : ಕೊಲೆಯಾದ ಅಪ್ರಾಪ್ತೆ ಪ್ರೀತಿಸುತ್ತಿದ್ದ ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ಆತನ ಬಳಿ ಇರುವ ಪತ್ರ ಹಾಗೂ ಆಡಿಯೋ ಇರುವ ಮೊಬೈಲ್ ವಶಕ್ಕೆ ಪಡೆದು ಆತನನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಮಧ್ಯೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಮಾರ್ಗದರ್ಶನದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದು, ಮಗಳನ್ನು ಕೊಲೆ ಮಾಡಿರುವ ಆರೋಪ ಇರುವ ತಂದೆ ಹಾಗೂ ಇತರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಒಂದೆರಡು ದಿನಗಳಲ್ಲಿ ತಿಳಿಯಲಿದೆ ಎಂದು ಈ ಟಿವಿ ಭಾರತ್ಗೆ ಎಸ್ಪಿ ಚೇತನ್ ತಿಳಿಸಿದ್ದಾರೆ.
ಇದನ್ನೂ ಓದಿ : ಅಂತರ್ಜಾತಿ ಯುವಕನೊಂದಿಗೆ ಪ್ರೀತಿ: ಜಮೀನಿನಲ್ಲಿ ಶವವಾಗಿ ಪತ್ತೆಯಾದ ಬಾಲಕಿ