ಮೈಸೂರು: ಡಿ.ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಂತ ಹೇಳ್ಕೊಂಡು ಅವರನ್ನ ಅವ್ರೇ ರಾಕ್ಷಸರ ರೀತಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಟೀಕಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತಿದ್ರು. ಆದ್ರೆ, ಜನ ಮೈತ್ರಿ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನ ಕೊಟ್ಟರು. ಆದ್ರೂ ಚುನಾವಣೆ ನಂತ್ರ ಅವರ ಬಂಡಾಟ ಮುಂದುವರೆದಿತ್ತು. ಈಗ ಇದಕ್ಕೆಲ್ಲಾ ತಕ್ಕ ಉತ್ತರ ನೀಡಲಾಗಿದೆ. ಜನಾದೇಶ ಇಲ್ಲದಿದ್ದರೂ ಅಧಿಕಾರ ಹಿಡಿಯಲಿಕ್ಕೆ ಹೋಗಿ ಎರಡೂ ಪಕ್ಷಗಳು ಅವಾಂತರ ಸೃಷ್ಟಿ ಮಾಡಿವೆ ಎಂದರು.
ಯಡಿಯೂರಪ್ಪನವರ ಅಧಿಕಾರ ಸ್ವೀಕಾರ ಶೀಘ್ರದಲ್ಲಿಯೇ ನಿಗದಿಯಾಗುತ್ತದೆ. ಅವರೊಂದಿಗೆ ಸಂಪುಟಕ್ಕೆ ಯಾರ್ಯಾರು ಸೇರಬೇಕೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ನನಗೆ ಯಾವ ಜವಬ್ದಾರಿ ಕೊಟ್ಟರೂ ನಿರ್ವಹಿಸಲು ನಾನು ಸಿದ್ಧ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದರು.
ರೈತರ ಸಾಲ ಮನ್ನಾ ವಿಚಾರದ ಗೊಂದಲ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಇದೇ ವೇಳೆ ಅವರು ಭರವಸೆ ಕೊಟ್ಟರು.