ಮೈಸೂರು: ಮೂರು ಜನರನ್ನ ಉಪಮುಖ್ಯಮಂತ್ರಿಯಾಗಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ಯೋಚನೆ ಮಾಡಬೇಕಿತ್ತು ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ಹೇಳಿದ್ದಾರೆ.
ಇಂದು ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ರಾಜಕೀಯ ಗೊಂದಲ ಇದೆ. ಇಂತಹ ಸಮಯದಲ್ಲಿ ಮೂರು ಜನ ಉಪ ಮುಖ್ಯಮಂತ್ರಿಗಳನ್ನು ಮಾಡುವ ಆತುರ ಏಕೆ ಇತ್ತು. ಅಷ್ಟಕ್ಕೂ ಮೂರು ಜನ ಡಿಸಿಎಂ ನೇಮಕಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಈ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರ ಬರಲು 17 ಜನ ಅತೃಪ್ತರು ಕಾರಣರಾಗಿದ್ದಾರೆ. ಇಂತಹವರು ಈಗ ನಿಮ್ಮನ್ನು ಅಧಿಕಾರಕ್ಕೆ ತಂದು ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೂ ಬಹಳ ಅಸಮಾಧಾನ ಇದೆ. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭವನ್ನು ನೋಡಿದರೆ ಬಿಜೆಪಿಯಲ್ಲಿ ಸ್ವಾರ್ಥವೇ ಹೆಚ್ಚಾಗುತ್ತಿದೆ ಎಂಬಂತಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನ ನಂತರ ಅತೃಪ್ತರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಹೇಳಿದ್ದಾರೆ. ಆ ಬಗ್ಗೆ ಕಾದು ನೋಡೋಣ ಎಂದರು.
ಇನ್ನು ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾದ ಒಳ ಮೀಸಲಾತಿಯನ್ನು ನಾನು ವಿರೋಧಿಸುತ್ತೇನೆ. ದೇಶದಲ್ಲಿ ಜಾತೀಯತೆ ಇರುವವರೆಗೆ ಮೀಸಲಾತಿ ಇರಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.