ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ, ಮೈಸೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ರಾಮಸ್ವಾಮಿ ವೃತ್ತದ ಬಳಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಒಂದು ಕಡೆ ಟೈರ್ಗೆ ಬೆಂಕಿ ಹಚ್ಚಿ ಮತ್ತೊಂದೆಡೆ ರಸ್ತೆ ತಡೆ ನಡೆಸಿದರು.
ಸಿದ್ದರಾಮಯ್ಯನವರ ಹುಟ್ಟುಹಬ್ಬದ ನಿಮಿತ್ತ ದಾವಣಗೆರೆಯಲ್ಲಿ 75ನೇ ಅಮೃತ ಮಹೋತ್ಸವ ಆಚರಿಸಲಾಯಿತು. ಇದಕ್ಕೆ 15 ಲಕ್ಷಕ್ಕೂ ಹೆಚ್ಚು ಜನ ಸೇರಿ ಅಭೂತಪೂರ್ವ ಯಶಸ್ಸು ದೊರೆತು, ರಾಷ್ಟ್ರಮಟ್ಟದಲ್ಲೇ ಹೊಸ ಸಂಚಲನ ಮೂಡಿಸಿತು. ಇದನ್ನು ಸಹಿಸಿಕೊಳ್ಳಲಾಗದೆ ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯನ್ನು ಎದುರಿಸಲಾಗದೆ ಇಂತಹ ಕೃತ್ಯವೆಸಗಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು.
ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ಪ್ರವಾಹ ಪರಿಸ್ಥಿತಿ, ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಇದು ಪೂರ್ವನಿಯೋಜಿತ ಪಿತೂರಿಯಾಗಿದ್ದು, ಹಣ ಕೊಟ್ಟು ಪುಂಡರನ್ನು ಎತ್ತಿಕಟ್ಟಿ ಕಪ್ಪು ಬಾವುಟ ತೋರಿಸಲಾಗಿದೆ. ಮೊಟ್ಟೆ ಎಸೆದು ಗೂಂಡಾ ವರ್ತನೆ ತೋರಿಸಿ ವಿಕೃತಿ ಮೆರೆದು, ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾರ್ಯಕರ್ತರು ದೂರಿದರು.
ಕಠಿಣ ಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ: ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಬಿಜೆಪಿ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಮುಖ್ಯಮಂತ್ರಿ ಹೋದಲೆಲ್ಲಾ ಮೊಟ್ಟೆ, ಸಗಣಿಯಲ್ಲಿ ಹೊಡೆಯುತ್ತೇವೆ. ರಾಜ್ಯದಲ್ಲಿ ಗೌರವವಾಗಿ ನಡೆದುಕೊಳ್ಳುವ ಕೆಲಸ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ