ಮೈಸೂರು: ಮದ್ಯದ ಮತ್ತಿನಲ್ಲಿ ದ್ವಿಚಕ್ರ ವಾಹನ ಸವಾರ ಪೊಲೀಸ್ ವ್ಯಾನ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಪೊಲೀಸ್ ವ್ಯಾನ್ ಕೆಳಗೆ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಮೈಸೂರಿನ ಜಲದರ್ಶಿನಿ ಸಮೀಪ ಬುಧವಾರ ರಾತ್ರಿ ನಡೆದಿದೆ.
ನಗರದಿಂದ ಹುಣಸೂರು ರಸ್ತೆ ಮೂಲಕ ತೆರಳುತ್ತಿದ್ದ ಸಿಎಆರ್ ಪೊಲೀಸ್ ವಾಹನ ಜಲದರ್ಶಿನಿಗೆ ಪ್ರವೇಶಿಸಲು ಮುಂದಾಗಿದೆ. ಇದೇ ವೇಳೆ ದ್ವಿಚಕ್ರ ವಾಹನ ಸವಾರ ಮೊಬೈಲ್ನಲ್ಲಿ ಮಾತನಾಡುತ್ತಾ ಬರುತ್ತಿದ್ದನೆಂದು ಹೇಳಲಾಗಿದ್ದು, ನಿಯಂತ್ರಣ ತಪ್ಪಿ ಸಿಎಆರ್ ವ್ಯಾನ್ಗೆ ಗುದ್ದಿದ್ದಾನೆ. ಸುಮಾರು 50 ಅಡಿ ದೂರ ದ್ವಿಚಕ್ರವಾಹನ ನೆಲದಲ್ಲೇ ಜಾರಿಕೊಂಡು ಬಂದು ಪೊಲೀಸ್ ವಾಹನದ ಕೆಳಗೆ ಸಿಲುಕಿಕೊಂಡಿದೆ.
ಇದನ್ನೂ ಓದಿ: ಮದ್ಯ ಸೇವನೆಗೆ ಹಣ ಹೊಂದಿಸಲು ಕಳ್ಳತನ, ಕುಡುಕನ ಬಂಧನ
ದ್ವಿಚಕ್ರವಾಹನ ಸವಾರ ಪಾನಮತ್ತನಾಗಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಆತನನ್ನು ವಿವಿ ಪುರಂ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.