ಮೈಸೂರು : ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ಎಲ್ಲ ನಿಯಂತ್ರಣಗಳನ್ನು ಮೀರಿ ವ್ಯಾಪಿಸುತ್ತಿದೆ. ಔಷಧಗಳು, ಆಕ್ಸಿಜನ್ ಇತ್ಯಾದಿಗಳ ಕೊರತೆಯಿಂದ ಸಾವು-ನೋವುಗಳು ಸಂಭವಿಸುತ್ತಿವೆ.
ಜನರು ಬಹಳ ಜಾಗೃತರಾಗಿರಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.
ಇದು ಯಾರೂ ಯಾರನ್ನೂ ದೂಷಿಸುತ್ತ ಕೂರುವ ಸಮಯವಲ್ಲ. ಮನಃಪೂರ್ವಕವಾಗಿ ಸಾಂಕ್ರಾಮಿಕ ರೋಗಾಣುವಿನೊಡನೆ ಸೆಣಸಬೇಕಾದ ಸಮಯ.
ತಡಮಾಡದೆ ಕೂಡಲೇ ಲಸಿಕೆ ಹಾಕಿಸಿಕೊಳ್ಳುವುದು. ಪರಿಚಿತರೆಲ್ಲರನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು. ಶುದ್ಧವಾದ ಮಾಸ್ಕ್ ಕಡ್ಡಾಯವಾಗಿ ಮರೆಯದೆ ಧರಿಸುವುದು ಮುಖ್ಯ.
ಸೂಚನೆಯಂತೆ ಆರು ಅಡಿಗಳ ಅಂತರ ಕಾಯ್ದುಕೊಂಡರೆ ಜೀವಕ್ಕೆ ಯಾವುದೇ ತೊಂದರೆ ಸಂಭವಿಸುವುದಿಲ್ಲ. ಹೀಗೆ ಮಾಡಿದರೆ ಮಾತ್ರ ಈ ಸಾಂಕ್ರಾಮಿಕ ರೋಗವನ್ನು ಅಟ್ ಆನ್ ಆರ್ಮಿಸ್ ಡಿಸ್ಟನ್ಸ್ ಅನ್ನುವ ಹಾಗೆ ದೂರ ಇಡಬಹುದು.
ಊಟ-ತಿಂಡಿ ಸಮಯ ಹೊರತುಪಡಿಸಿ ಉಳಿದೆಲ್ಲ ಸಂದರ್ಭಗಳಲ್ಲಿ ಸರಿಯಾಗಿ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು. ಊಟೋಪಚಾರದ ಸಂದರ್ಭದಲ್ಲಿ ಸೋಪಿನಿಂದ ಕೈಗಳನ್ನು ಮರೆಯದೆ ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.
ಇದೆಲ್ಲಕ್ಕಿಂತ ಮುಖ್ಯವಾದದ್ದು ಪ್ರತಿಯೊಬ್ಬರು ಮನೆಗಳಲ್ಲಿ ಕುಟುಂಬದವರೊಡನೆ ಪ್ರೀತಿ, ಸಂತೋಷ ಹಾಗೂ ಸಮಾಧಾನಗಳಿಂದ ಕಾಲ ಕಳೆಯುವುದು ಒಳಿತು.
ಅನಿವಾರ್ಯತೆ ಇಲ್ಲದೆ ಮನೆಯಿಂದ ಹೊರಗೆ ಹೋಗದಿರುವುದು ಉಚಿತ. ಕೆಲಸದಲ್ಲಿರುವವರು ಮುಗಿದ ಕೂಡಲೇ ಮನೆಗೆ ಹಿಂದಿರುಗುವುದು ಸೂಕ್ತ. ವ್ಯರ್ಥವಾಗಿ ಅಲೆಯುವುದು, ಜನರೊಡನೆ ಲೋಕವಿರಾಮವಾಗಿ ಬೆರೆಯುವುದನ್ನು ನಿಲ್ಲಿಸಬೇಕು.
ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಮೇಲೆ ಅವಕ್ಕೆಲ್ಲ ಅವಕಾಶ ಇದ್ದೆ ಇರುತ್ತದೆ. ವೈಯಕ್ತಿಕವಾಗಿ ಹಾಗೂ ಯಾರಿಗೂ ಅನಾಹುತ ಆಗಬಾರದು.
ಎಲ್ಲರೂ ಕೋವಿಡ್ ಯೋಧರೆ ಆಗಿ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳಬೇಕಾದ ಸಮಯ ಈಗ ಬಂದಿದೆ. ಕೊರೊನಾ ಸಾಂಕ್ರಾಮಿಕ ಹೆಮ್ಮಾರಿ ರಣಕೇಕೆ ಮುಂದುವರಿಯಲು ಅವಕಾಶ ನೀಡಬಾರದು.
ಬಿಡುವಾದಾಗ ದೇವರಪೂಜೆ, ಧ್ಯಾನ, ಯೋಗ, ಪ್ರಾರ್ಥನೆಗಳನ್ನು ಮಾಡುತ್ತಾ ಮನೆಯವರೆಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸಲು ಇದು ಶುಭ ಸಂದರ್ಭ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.