ಮೈಸೂರು : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ನಂಜುಂಡೇಶ್ವರ ದೇವಾಲಯದ ಹುಂಡಿ ಎಣಿಕೆ ನಡೆದಿದೆ. 55 ದಿನಗಳಲ್ಲಿ 1.58 ಕೋಟಿ ರೂ.ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.
ನಿಷೇಧಿತ ನೋಟು ಪತ್ತೆ : ನಂಜುಂಡನಿಗೆ ಭಕ್ತರು ಇನ್ನೂ ನಿಷೇಧಿತ ನೋಟುಗಳ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಈ ಬಾರಿಯ ಎಣಿಕೆಯಲ್ಲಿ 24,000 ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಕಾಣಿಕೆಯಾಗಿ ಬಂದಿವೆ. 1000 ಮುಖಬೆಲೆಯ 4 ನೋಟುಗಳು ಹಾಗೂ 500 ಮುಖಬೆಲೆಯ 40 ನೋಟುಗಳು ದೊರೆತಿವೆ. ನೋಟುಗಳ ಅಮಾನ್ಯೀಕರಣವಾಗಿ 5 ವರ್ಷ ಕಳೆದರೂ ನಂಜುಂಡನ ಭಕ್ತರ ಬಳಿ ಇನ್ನೂ ನಿಷೇಧಿತ ನೋಟುಗಳು ಇವೆ ಎಂಬುದು ಇದರಿಂದ ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರು, ಕಳೆದ 55 ದಿನಗಳಲ್ಲಿ 1,58,68,243 (ಒಂದು ಕೋಟಿ ಐವತ್ತೆಂಟು ಲಕ್ಷದ ಅರವತ್ತೆಂಟು ಸಾವಿರದ ಇನ್ನೂರ ನಲವತ್ತ ಮೂರು ರೂ.) ಸಂಗ್ರಹವಾಗಿದೆ. ಕಳೆದ ಬಾರಿ 1, 29, 73, 194 ರೂ.ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.
ದೇವಸ್ಥಾನದ 37 ಹುಂಡಿಗಳಲ್ಲಿ 24 ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. ನಗದಿನ ಜತೆಗೆ 190 ಗ್ರಾಂ ಚಿನ್ನ, 3 ಕೆಜಿ 750 ಗ್ರಾಂ ಬೆಳ್ಳಿ ಹಾಗೂ 9 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ.
ಕೊರೊನಾ ಮಹಾಮಾರಿ ಕಡಿಮೆಯಾಗಿರುವ ಹಿನ್ನೆಲೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದೇ ಹೆಚ್ಚು ಆದಾಯಕ್ಕೆ ಕಾರಣವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ.