ಮೈಸೂರು : ಪ್ರತಿ ದಿನ ಒಂದೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣ ವಿಚಾರದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರ ತನಿಖೆಯನ್ನು ಸರಿಯಾಗಿ ಮಾಡಬೇಕು, ತನಿಖೆಯನ್ನು ಕೇವಲ ಕಲಬುರ್ಗಿಗೆ ಮಾತ್ರ ಸೀಮಿತ ಮಾಡಬಾರದು ಎಂದಿದ್ದಾರೆ.
ಪಿಎಸ್ಐ ಹಗರಣದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಶಾಮೀಲಾಗಿದೆ. ಇದರ ಜೊತೆಗೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕೆಂದು ಹೆಚ್.ವಿಶ್ವನಾಥ್ ಹೇಳಿದರು.
ಸಂತೋಷ್ ಜಿ ಹೇಳಿಕೆ ಸರಿ ಇದೆ : ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ ಹೊಸ ಹೊಸ ಮುಖಗಳಿಗೆ ಮಣೆ ಹಾಕ್ತೀವಿ ಎಂಬ ಬಿ ಎಲ್ ಸಂತೋಷ್ ಹೇಳಿಕೆ ಸರಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆಯೇ ಈ ರೀತಿ ಹೇಳಿಕೆ ನೀಡಿದ್ದರು. ಅದನ್ನೇ ಸಂತೋಷ್ ಹೇಳಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ಮುಖ್ಯಮಂತ್ರಿಗಳ ಸಾಫ್ಟ್ ಆಗಿ ಆಡಳಿತ ಮಾಡುತ್ತಿದ್ದೇನೆ ಎಂಬ ಹೇಳಿಕೆ ಸರಿಯಲ್ಲ. ಒಬ್ಬ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಾಫ್ಟ್ ಮತ್ತು ಹಾರ್ಡ್ ಎನ್ನುವುದು ಇಲ್ಲ. ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು. ನಿಮ್ಮ ಹಾರ್ಡ್ ಅಸ್ತ್ರವನ್ನು ಹಗರಣ ಮಾಡಿದವರ ಮೇಲೆ ಬಳಸಿ, ಶಾಂತಿ ಕದಡುವ ಆರೆಸ್ಸೆಸ್, ಭಜರಂಗದಳದವರ ಮೇಲೆ ಬಳಸಿ. ಸರ್ಕಾರಕ್ಕೆ ಪ್ರತಿದಿನ ಕೆಟ್ಟ ಹೆಸರು ಬರುತ್ತಿದೆ ಎಂದರು.
ಒಂದಿಲ್ಲೊಂದು ಹಗರಣಗಳು ಇದಕ್ಕೆ ಕಾರಣವಾಗಿವೆ. ಕೊಡಲೇ ನಿಷ್ಪಕ್ಷಪಾತ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿದಿನ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ: ಯತ್ನಾಳ್