ಮೈಸೂರು: ಅರಮನೆಯಲ್ಲಿಂದು ಸಾಂಪ್ರದಾಯಿಕವಾಗಿ ಆಯುಧ ಪೂಜಾ ಕೈಂಕರ್ಯಗಳನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸವಾರಿ ತೊಟ್ಟಿಯಲ್ಲಿ ನೆರವೇರಿಸಿದರು.
ದೇಶದಲ್ಲೇ ರಾಜಪರಂಪರೆಯಂತೆ ಇಂದಿಗೂ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನಡೆಯುವುದು ಮೈಸೂರು ಅರಮನೆಯಲ್ಲಿ. ಶರನ್ನವರಾತ್ರಿಯ 8ನೇ ದಿನವಾದ ಇಂದು ಅರಮನೆಯಲ್ಲಿ ಆಯುಧ ಪೂಜೆ ಕೈಂಕರ್ಯಗಳು ನೆರವೇರಿದವು.
ಬೆಳಗ್ಗೆ ರಾಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ ಕಲ್ಯಾಣ ಮಂಟಪದಲ್ಲಿ ತಂದು ಜೋಡಿಸಿಡಲಾಯಿತು. ಬಳಿಕ ಸವಾರಿ ತೊಟ್ಟಿಗೆ ಮಂಗಳವಾದ್ಯದೊಂದಿಗೆ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳನ್ನು ಕರೆತಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ನಂತರ ಯದುವೀರ್ ಬೆಳಗ್ಗೆ 11:02ರಿಂದ 11:22ರ ಶುಭ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಜೋಡಿಸಿಟ್ಟಿದ್ದ ಸಾಂಪ್ರದಾಯಿಕ ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ:
ಕಲ್ಯಾಣ ಮಂಟಪದಿಂದ ಆಯುಧಗಳಿಗೆ ಪೂಜೆ ಮಾಡಿದ ನಂತರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸವಾರಿ ತೊಟ್ಟಿಯ ಮಂಟಪಕ್ಕೆ ಆಗಮಿಸಿ ಸಾಂಪ್ರದಾಯಿಕವಾಗಿ ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಒಂಟೆ, ಬೆಳ್ಳಿ ಪಲ್ಲಕ್ಕಿ ಹಾಗೂ ರಾಜ ಪರಂಪರೆಯ ಧ್ವಜ ಹಾಗು ತಾವು ಬಳಸುವ ಐಷಾರಾಮಿ ಕಾರುಗಳಿಗೂ ಪೂಜೆ ಸಲ್ಲಿಸಿದರು. ಬಳಿಕ ಮೈಸೂರು ಸಂಸ್ಥಾನ ಗೀತೆ ಕಾಯೋ ಶ್ರೀ ಗೌರಿ ಗೀತೆಯನ್ನು ನುಡಿಸುವುದರೊಂದಿಗೆ ಸಾಂಪ್ರದಾಯಿಕ ಆಯುಧ ಪೂಜೆಯನ್ನು ಮುಕ್ತಾಯಗೊಳಿಸಿದರು.
ಸವಾರಿ ತೊಟ್ಟಿಯಲ್ಲಿ ಯದುವೀರ್ ಆಯುಧ ಪೂಜೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅರಮನೆಯ ಮಹಡಿಯ ಮೇಲಿಂದ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್, ಮಗ ಆದ್ಯವೀರ್ ವೀಕ್ಷಣೆ ಮಾಡಿದರು.
ಇದನ್ನೂ ಓದಿ: ಸವಾರಿ ತೊಟ್ಟಿಯಲ್ಲಿ ಯದುವೀರ್ರಿಂದ ಸಾಂಪ್ರದಾಯಿಕ ಆಯುಧ ಪೂಜೆ