ಮೈಸೂರು: ಬಿಸಿ ನೀರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಮಗ ಮೃತಪಟ್ಟರೂ ಸಂಕಷ್ದಲ್ಲಿದ್ದ ಬೇರೊಬ್ಬ ರೋಗಿಯನ್ನ ಆಸ್ಪತ್ರೆಗೆ ಸೇರಿಸಿದ್ದಾನೆ ಇಲ್ಲಿನ ಆ್ಯಂಬುಲೆನ್ಸ್. ಚಾಲಕ ಮುಬಾರಕ್ ಎಂಬಾತ ತನಗೆ ಸಹಾಯವಾಣಿ ಕೇಂದ್ರದಿಂದ ಕರೆ ಬಂದ ಹಿನ್ನೆಲೆ ಮೊದಲು ತನ್ನ ಕರ್ತವ್ಯ ಮುಗಿಸಿ ನಂತರ ಮಗನ ಅಂತ್ಯಸಂಸ್ಕಾರಕ್ಕೆ ಧಾವಿಸಿದ ಕರುಣಾಜನಕ ಕಥೆ ನಗರದಲ್ಲಿ ನಡೆದಿದೆ.
ಸಿದ್ದಿಕ್ ನಗರದ ನಿವಾಸಿ, ಸಹಾಯವಾಣಿ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಮುಬಾರಕ್ ಅವರ 2 ವರ್ಷ ಪುತ್ರನಿಗೆ ಆಕಸ್ಮಿಕವಾಗಿ ಬಿಸಿ ನೀರು ಬಿದ್ದ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಿ 4 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಮಗು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ತಡರಾತ್ರಿ ಮೃತಪಟ್ಟಿದೆ. ಮಗನ ಸಾವಿನ ಸುದ್ದಿ ತಿಳಿದರೂ ಸಹಾಯವಾಣಿ ಕೇಂದ್ರದಿಂದ ಕರೆ ಬಂದಾಗ ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಮಾನವೀಯತೆ ಮೆರೆದಿದ್ದಾನೆ.
ಸಹಾಯವಾಣಿ ಕೇಂದ್ರಕ್ಕೆ ಬಂದು ತಮ್ಮ ಮಗು ಮೃತಪಟ್ಟಿರುವ ವಿಷಯವನ್ನ ಹೇಳಿದಾಗ ಇವರ ಕರ್ತವ್ಯ ಪ್ರಜ್ಞೆಯನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ಒಂದು ಕ್ಷಣ ಮೂಕವಿಸ್ಮಿತರಾಗಿದ್ದಾರೆ.